ಮಂಗಳೂರು: ಏಪ್ರಿಲ್ 04 ರಂದು ಸಂಜೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ನೀರುಮಾರ್ಗ ಗ್ರಾಮದ ಪಾಲನೆ ಎಂಬಲ್ಲಿ ಒಬ್ಬಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕತ್ತಿನಲ್ಲಿದ್ದ 8 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಬೈಕ್ ನಲ್ಲಿ ಬಂದು ದಾರಿ ಕೇಳುವ ನೆಪದಲ್ಲಿ ಕಸಿದುಕೊಂಡು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಕೃತ್ಯಕ್ಕೆ ಉಪಯೋಗಿಸಿದ ಸ್ಕೂಟರ್ ಸಮೇತ ಏ. 25 ರಂದು ಬಂಧಿಸಲಾಗಿದೆ.
ಸರವನ್ನು ಸುಲಿಗೆ ಮಾಡಿದ ಆರೋಪಿಗಳಾದ ವಾಮಂಜೂರು ಅರೀಫ್ ( 26 ), ಬೊಂದೇಲ್ ನ ಮೊಹಮ್ಮದ್ ಹನೀಫ್ ( 36 ) ಎನ್ನುವವರನ್ನು ಬಂಧಿಸಿದ್ದಾರೆ. ಇವರ ಜೊತೆಗೆ ಕದ್ದ ಆಭರಣಗಳನ್ನು ಖರೀದಿಸಿದವರಿಬ್ಬರನ್ನು ಬಂಧಿಸಲಾಗಿದೆ.
ಅರೀಫ್ ವಿರುದ್ಧ ಈಗಾಗಲೇ ಮಂಗಳೂರು ಗ್ರಾಮಾಂತರ , ಕಂಕನಾಡಿ ನಗರ , ಕಾವೂರು , ಬಜಪೆ ಮೂಡಬಿದ್ರೆ , ಬಂಟ್ವಾಳ ಗ್ರಾಮಾಂತರ , ಬಂಟ್ವಾಳ ನಗರ ಪೊಲೀಸು ಠಾಣೆಗಳಲ್ಲಿ ಸುಲಿಗೆ , ಕೊಲೆ ಯತ್ನ , ಮನೆ ಕಳ್ಳತನ , ಸಾಮಾನ್ಯ ಕಳ್ಳತನದಂತಹ ಒಟ್ಟು 18 ಪ್ರಕರಣಗಳು ದಾಖಲಾಗಿ , ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿವೆ. ಹನೀಫ್ ವಿರುದ್ಧ ಈಗಾಗಲೇ ಬಜಪೆ ಪೊಲೀಸ್ ಠಾಣೆಯಲ್ಲಿ 2016 ರಲ್ಲಿ 1 ಸುಲಿಗೆ ಪ್ರಕರಣ ದಾಖಲಾಗಿರುತ್ತದೆ.
ಆರೋಪಿ ಮೊಹಮ್ಮದ್ ಹನೀಫ್ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೆಲರೈ ಎಂಬಲ್ಲಿ ಪಾರ್ಕ್ ಮಾಡಿದ್ದ ಒಂದು ಆಕ್ಸಿಸ್ ಸ್ಕೂಟರ ನ್ನು ಕಳವು ಮಾಡಿ ಅದೇ ದ್ವಿಚಕ್ರವಾಹನವನ್ನು ಉಪಯೋಗಿಸಿ , ಕಾವೂರು ಪೊಲೀಸು ಠಾಣಾ ವ್ಯಾಪ್ತಿಯ ಬೊಲ್ದುಗುಡ್ಡೆ ಎಂಬಲ್ಲಿ ಮಹಿಳೆಯ ಕತ್ತಿನಲ್ಲಿದ್ದ ಸುಮಾರು 10 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ದಾರಿ ಕೇಳುವ ನೆಪದಲ್ಲಿ ಸುಲಿಗೆ ಮಾಡಿರುವುದು ತನಿಖೆಯಲ್ಲಿ ತಿಳಿದು ಬಂದಿದೆ.