ಮಂಗಳೂರು: ವಿದೇಶದಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಅಲ್ಲಿಯೇ ಉದ್ಯೋಗ ಮಾಡುತ್ತಿದ್ದ ಕುತ್ತಾರು ಪಂಡಿತ್ ಹೌಸ್ ನಿವಾಸಿ ರೊನಾಲ್ಡ್ ಡಿಸೋಜ (50) ರ ಮೃತದೇಹವನ್ನು ಅಲ್ಲಿನ ಪೊಲೀಸ್ ಪ್ರಕ್ರಿಯೆ ಮುಗಿದ ತಕ್ಷಣ ಮೃತದೇಹವನ್ನು ತವರೂರಿಗೆ ತರಲು ಮಾಜಿ ಸಚಿವ, ಶಾಸಕ ಯು.ಟಿ ಖಾದರ್ ಸ್ಪಂದಿಸಿದರು.
ಯು.ಟಿ ಖಾದರ್ ಅವರು ಮೃತರ ಮನೆಮಂದಿಯ ಮನವಿಯಂತೆ ಇಂಡಿಯನ್ ಸೋಷಿಯಲ್ ಫೋರಂ ಸಂಘಟನೆಯ ಜಿ.ಕೆ. ಸಲೀಂ ಗುರುವಾಯನಕೆರೆ ಮತ್ತು ಸಿದ್ದೀಖ್ ಉಳ್ಳಾಲ್ ಅವರನ್ನು ಸಂಪರ್ಕಿಸಿ ಎಲ್ಲಾ ಪ್ರಕ್ರಿಯೆ ಮುಗಿದ ಕೂಡಲೇ ಮೃತದೇಹ ತವರೂರಿಗೆ ತರಬೇಕೆಂದು ಮನವಿ ಮಾಡಿದರು. ಅದಕ್ಕೆ ಪೊಲೀಸ್ ಪ್ರಕ್ರಿಯೆ ಮುಗಿದ ತಕ್ಷಣ ಮೃತದೇಹವನ್ನು ತವರೂರಿಗೆ ಕಳುಹಿಸುವ ವ್ಯವಸ್ಥೆ ಮಾಡುತ್ತೇವೆ ಎಂದು ಇಂಡಿಯನ್ ಸೋಷಿಯಲ್ ಫೋರಂ ಸಂಘಟನೆಯ ಮುಖಂಡರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಾರ್ಚ್ 19 ರಂದು ಕುತ್ತಾರು ಪಂಡಿತ್ ಹೌಸ್ ನಿವಾಸಿ ರೊನಾಲ್ಡ್ ಡಿಸೋಜ (50) ತಮ್ಮ ರೂಮಿನಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆ ದಿನ ಮನೆಮಂದಿ ಜತೆಗೆ ವೀಡಿಯೋ ಸಂಭಾಷಣೆ ನಡೆಸಿದ್ದರು. ಹಾಗೆಯೇ ಎರಡು ದಿನದಲ್ಲಿ ಊರಿಗೆ ಬರುವುದಾಗಿ ತಿಳಿಸಿದ್ದರು. ಬಳಿಕ ಅವರು ಮೃತಪಟ್ಟಿರುವ ವಿಚಾರ ಮುಂಬೈ ಖಾಸಗಿ ಏಜೆನ್ಸಿ ಮುಖಾಂತರ ಮಾ.21 ರಂದು ಮನೆಮಂದಿಗೆ ತಿಳಿಸಿದ್ದರು. ಮೃತ ರೊನಾಲ್ಡ್ ಡಿ ಸೋಜಾ ಅವರು ಸೌದಿ ಅರೇಬಿಯಾದ ಜಿಝಾನ್ ನ ಒಸೋಲ್ ಅಲ್ ಬಾನ್ ಎಂಬ ಕಂಪೆನಿಯಲ್ಲಿ ರೊನಾಲ್ಡ್ ಎಲೆಕ್ಟ್ರಿಶಿಯನ್ ಆಗಿ ದುಡಿಯುತ್ತಿದ್ದರು.