ಅಮರಾವತಿ: ಅಸನಿ ಚಂಡಮಾರುತದ ಪ್ರಭಾವದಿಂದಾಗಿ ಆಂಧ್ರಪ್ರದೇಶದ ಶ್ರೀಕುಕಲಂ ಜಿಲ್ಲೆಯ ಸುನ್ನಪಲ್ಲಿಯ ಕರಾವಳಿ ಪ್ರದೇಶಕ್ಕೆ ಬಂಗಾರ ಬಣ್ಣದ ರಥವೊಂದು ತೇಲಿ ಬಂದಿದೆ.
ಸಮುದ್ರದಲ್ಲಿ ತೇಲುತ್ತಿದ್ದ ರಥವನ್ನು ನೋಡಿದ ಗ್ರಾಮಸ್ಥರು ಅದನ್ನು ಹಗ್ಗ ಕಟ್ಟಿ ಎಳೆದು ದಡಕ್ಕೆ ತಂದಿದ್ದಾರೆ. ಚಂಡಮಾರುತದ ತೀವ್ರತೆ ಹೆಚ್ಚಾಗಿರುವುದರಿಂದಾಗಿ ಇದು ಮಯನ್ಮಾರ್, ಮಲೇಷಿಯಾ ಅಥವಾ ಥೈಲೆಂಡ್‍ನಿಂದ ಬಂದಿರಬಹುದೆಂದು ಶಂಕಿಸಲಾಗಿದೆ.
ಈ ರಥವು ನೋಡಲು ಏಷ್ಯಾ ರಾಷ್ಟ್ರಗಳ ಮಠದ ಆಕಾರವನ್ನು ಹೊಂದಿದೆ. ಚಂಡಮಾರುತದ ಪ್ರಭಾವದಿಂದಾಗಿ ಉಂಟಾದ ಎತ್ತರದ ಅಲೆಗಳ ಕಾರಣದಿಂದಾಗಿ ರಥವು ಕರಾವಳಿಗೆ ಕೊಚ್ಚಿ ಹೋಗಿರಬಹುದು ಎಂದು ಗ್ರಾಮಸ್ಥರು ಹೇಳಿದ್ದಾರೆ. ಈ ರಥವನ್ನು ನೋಡಲು ಸುತ್ತಮುತ್ತಲಿನ ಜನರೆಲ್ಲರೂ ಸಮದ್ರದ ದಡದಲ್ಲಿ ಸೇರಿದ್ದರು. ಜೋತೆಗೆ ಈ ರಥವನ್ನು ಕೌತುಕದಿಂದ ವೀಕ್ಷಿಸಿದರು.
ಈ ಬಗ್ಗೆ ಸಂತೆಬೊಮ್ಮಾಳಿ ತಹಸೀಲ್ದಾರ್ ಜೆ.ಚಲಮಯ್ಯ ಮಾತನಾಡಿ, ಯಾವುದೇ ದೇಶದಿಂದ ಬಂದಿರದಿರಬಹುದು ಅಥವಾ ಭಾರತೀಯ ಕರಾವಳಿಯಲ್ಲಿ ಎಲ್ಲೋ ಕೆಲವು ಚಲನಚಿತ್ರಗಳ ಚಿತ್ರೀಕರಣಕ್ಕಾಗಿ ರಥವನ್ನು ಬಳಸಲಾಗಿರಬಹುದು. ಇದು ಚಂಡಮಾರುತದ ಪ್ರಭಾವದಿಂದಾಗಿ ಶ್ರೀಕಾಕುಲಂ ತೀರಕ್ಕೆ ಬಂದಿರಬಹುದು ಎಂದು ಶಂಕಿಸಲಾಗಿದೆ ಎಂದು ಹೇಳಿದರು.