ಬಿಹಾರದ ಪುರ್ನಿಯಾ ಜಿಲ್ಲೆಯ ಗಣೇಶ್‌ಪುರ ಗ್ರಾಮದ ಜನರು ಹಲವಾರು ತಿಂಗಳಿಂದ ಅನಿಯಮಿತ ವಿದ್ಯುತ್ ಕಡಿತ ಸಮಸ್ಯೆಯಿಂದ ತಲೆಕೆಡಿಸಿಕೊಂಡಿದ್ದರು. ಕತ್ತಲಾಗುತ್ತಿದ್ದಂತೆ ಯಾವಾಗೆಂದರೆ ಆಗ ಕರೆಂಟ್ ಹೊರಟುಹೋಗುತ್ತಿತ್ತು. ಆದರೆ ಅಕ್ಕಪಕ್ಕದ ಹಳ್ಳಿಗಳಲ್ಲಿ ಮಾತ್ರ ವಿದ್ಯುತ್ ವ್ಯತ್ಯಯದಂತಹ ಸಮಸ್ಯೆಗಳೇ ಇರಲಿಲ್ಲ. ಆದರೆ ನಮ್ಮ ಹಳ್ಳಿಯಲ್ಲಿ ಮಾತ್ರ ಏಕೆ ಈ ರೀತಿಯಾಗುತ್ತಿದೆ ಎಂದು ಗ್ರಾಮಸ್ಥರು ಯೋಚಿಸುತ್ತಿದ್ದರು. ಆದ್ದರಿಂದ ಪದೇ ಪದೆ ಹೀಗಾಗುವುದು ಎಲ್ಲರ ಅನುಮಾನಕ್ಕೆ ಕಾರಣವಾಗಿ ಇದಕ್ಕೆ ನಿಖರವಾದ ಕಾರಣ ಹುಡುಕಲು ನಿರ್ಧರಿಸಿದರು. ಆಗ, ಕರೆಂಟ್ ಸಮಸ್ಯೆಯ ಹಿಂದೆ ವಿಲಕ್ಷಣವಾದುದ್ದೊಂದು ಪ್ರಕರಣವಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ಪರಿಶೀಲಿಸಿದ ನಂತರ, ಅಲ್ಲಿನ ಲೈನ್ ಮ್ಯಾನ್ ತನ್ನ ಗೆಳತಿಯನ್ನು ಕತ್ತಲೆಯಲ್ಲಿ ಭೇಟಿಯಾಗಲು ಹಳ್ಳಿಯ ವಿದ್ಯುತ್ ಸರಬರಾಜನ್ನು ಕಡಿತಗೊಳಿಸುತ್ತಿರುವುದು ತಿಳಿದು ಗ್ರಾಮಸ್ಥರು ಆಘಾತಕ್ಕೊಳಗಾದರು. ಹಳ್ಳಿಗೆ ವಿದ್ಯುತ್ ಸರಬರಾಜನ್ನು ಕಡಿತಗೊಳಿಸಿ, ಕತ್ತಲೆಯಲ್ಲಿ ಆತ ತನ್ನ ಗೆಳತಿಯನ್ನು ಭೇಟಿಯಾಗಲು ಬರುತ್ತಿದ್ದ.
ಕತ್ತಲಿನಲ್ಲಿ ಸ್ಥಳೀಯ ಶಾಲೆಯೊಂದರ ಬಳಿ ಇರುವಾಗ ಗ್ರಾಮಸ್ಥರು ಅಲ್ಲಿಗೆ ಮುತ್ತಿಗೆ ಹಾಕಿ ಲೈನ್ ಮ್ಯಾನ್ ಗೆ ಸರಿಯಾಗಿ ಥಳಿಸಿದ್ದಾರೆ. ಮತ್ತು ಆತನನ್ನು ಗ್ರಾಮದಲ್ಲೆಲ್ಲಾ ಮೆರವಣಿಗೆ ಮಾಡಲಾಯಿತು. ಇದಕ್ಕೆ ಪರಿಹಾರ ಕಂಡುಕೊಳ್ಳಲು ಗ್ರಾಮಸ್ಥರು ಸರಪಂಚ್ ಹಾಗೂ ಇತರ ಗ್ರಾಮಸಭೆ ಸದಸ್ಯರ ಸಮ್ಮುಖದಲ್ಲಿ ಆತನ ಗೆಳತಿಯೊಂದಿಗೆ ವಿವಾಹವಾಗುವಂತೆ ಮಾಡಿದರು. ಗ್ರಾಮಸ್ಥರು ಲೈನ್ ಮ್ಯಾನ್ ವಿರುದ್ಧ ಯಾವುದೇ ಪೊಲೀಸ್ ಕೇಸ್ ದಾಖಲಿಸಿಲ್ಲ.