ಮೂಡುಬಿದ್ರೆ : ಗ್ಯಾಂಗ್ ಒಂದು ಮೂವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಘಟನೆ ಕಲ್ಲಬೆಟ್ಟು ಗ್ರಾಮದ ಗಂಟಾಲ್ಕಟ್ಟೆ ಬಳಿ ನಡೆದಿದೆ. ವೈಯಕ್ತಿಕ ದ್ವೇಷದಿಂದಾಗಿ ಮೂವರು ವ್ಯಕ್ತಿಗಳ ಮೇಲೆ ಗ್ಯಾಂಗ್ ಒಂದು ಹಲ್ಲೆ ಮಾಡಿದೆ. ಮೂವರು ಪೊಲೀಸ್ ಮಾಹಿತಿದಾರರಾಗಿದ್ದಾರೆ ಎಂದು ಆ ಗ್ಯಾಂಗ್ನವರು ಅನುಮಾನಗೊಂಡು ಕೊಲೆ ಯತ್ನ ನಡೆಸಿದ್ದಾರೆ.
ದಾಳಿಯಲ್ಲಿ ಗಂಭೀರ ಗಾಯಗೊಂಡಿರುವ ಶಬ್ಬೀರ್, ಮುಹಮ್ಮದ್ ಅನ್ಸರ್ ಮತ್ತು ಇಸ್ಮಾಯಿಲ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನೆರೆಹೊರೆಯ ಸಾಹುಲ್, ಫಾರೂಕ್, ಜಲೀಲ್, ಇಬ್ರಾನ್ ಮತ್ತು ಶಫಿ ಈ ದಾಳಿ ನಡೆಸಿದ್ದಾರೆ ಎಂದು ಹೇಳಲಾಗಿದೆ. ಅನ್ಸಾರ್ ತನ್ನ ಮಾವ ಶಬ್ಬೀರ್ ಮತ್ತು ಚಿಕ್ಕಪ್ಪ ಇಸ್ಮಾಯಿಲ್ ಅವರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಪಿಕ್ ಅಪ್ ವ್ಯಾನ್ ಮತ್ತು ರಿಟ್ಜ್ ಕಾರಿನಲ್ಲಿ ಬಂದ ಆರೋಪಿಗಳು ಮೂವರನ್ನು ತಡೆದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದು ಮೂವರೂ ಗಂಭೀರ ಗಾಯಗೊಂಡಿದ್ದಾರೆ.
ಆರೋಪಿಗಳಿಗೆ ಅನ್ಸರ್ ತಂದೆ ಮೇಲೆ ಮೊದಲೇ ದ್ವೇಷವಿದೆ ಎಂದು ತಿಳಿದುಬಂದಿದೆ. ಈ ಹಿಂದೆ, ಅನ್ಸರ್ ಪೊಲೀಸ್ ಮಾಹಿತಿದಾರರಾಗಿರಬಹುದು ಎಂಬ ಅನುಮಾನದಿಂದ ಈ ಗ್ಯಾಂಗ್ ಅವರ ಮೇಲೆ ಹಲ್ಲೆ ನಡೆಸಿತ್ತು. ಈಗ ಮತ್ತೆ ಕೊಲೆ ಯತ್ನ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂವರು ಆರೋಪಿಗಳು ಪರಾರಿಯಾಗಿದ್ದಾರೆ. ಜಾನುವಾರು ಕಳ್ಳತನ, ಕೋಮು ಸಂಘರ್ಷ ಮತ್ತು ಇತರ ಅಪರಾಧಗಳಿಗೆ ಆರೋಪಿಗಳು ಕುಖ್ಯಾತರಾಗಿದ್ದಾರೆ. ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.