ಮಂಡ್ಯ: ಹಿಂದೂ ಮತ್ತು ಮುಸಲ್ಮಾನರ ನಡುವಣ ಸಾಮರಸ್ಯಕ್ಕೆ ಧಕ್ಕೆಯೊದಗುವಂತಹ ಕೆಲ ಪ್ರಕರಣಗಳು, ಘಟನೆಗಳು ರಾಜ್ಯದಲ್ಲಿ ಇತ್ತೀಚೆಗೆ ನಡೆಯುತ್ತಿವೆ. ಇವುಗಳ ಪೈಕಿ ಇತ್ತೀಚೆಗೆ ಪ್ರಮುಖವಾಗಿ ಕೇಳಿಬಂದಿದ್ದು ಟಿಪ್ಪು ಸುಲ್ತಾನ್ ಗೆ ಸಂಬಂಧಪಟ್ಟಂತೆ ಸಲಾಂ ಆರತಿ. ಶೃಂಗೇರಿಯಿಂದ ಹಿಡಿದು ಮಂಡ್ಯ, ಮೈಸೂರು, ಬೇಲೂರುವರೆಗೂ ಇದು ಹಬ್ಬಿದೆ. ಈ ಸಲಾಂ ಆರತಿ ದಂಗಲ್ ಸಮ್ಮುಖದಲ್ಲಿ ಇದೀಗ ಸಲಾಂ ಆರತಿ ಹೆಸರನ್ನ ಸಂಧ್ಯಾ ಆರತಿ ಎಂದು ಬದಲಿಸಲು ಒಪ್ಪಿಗೆ ನೀಡಲಾಗಿದೆ.
ಸಂಧ್ಯಾರತಿ ಹೆಸರು ಬದಲಿಸಲು ಜಿಲ್ಲಾಡಳಿತದ ಗ್ರೀನ್ ಸಿಗ್ನಲ್, ಆಯುಕ್ತರ ಆದೇಶ ಬಾಕಿ:
ಮಂಡ್ಯದಲ್ಲಿರುವ ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿಯು ಪೂಜೆ ಹೆಸರನ್ನ ಬದಲಿಸುವಂತೆ ಮಂಡ್ಯ ಜಿಲ್ಲಾಧಿಕಾರಿ ಎಸ್. ಅಶ್ವಥಿಗೆ ದೇವಸ್ಥಾನ ಮಂಡಳಿ ಪತ್ರ ಬರೆದಿತ್ತು. ಪ್ರತೀ ದಿನ ದೇಗುಲದಲ್ಲಿ ಟಿಪ್ಪು ಸುಲ್ತಾನ್ ಸಲಾಂ ಆರತಿ ನಡೀತಿತ್ತು. ಸಲಾಂ ಆರತಿಯನ್ನ ವಿರೋಧಿಸಿ ಕೆಲ ಹಿಂದೂ ಸಂಘಟನೆಗಳು ಆಕ್ಷೇಪ ಎತ್ತಿವೆ. ಹಾಗಾಗಿ ಪೂಜೆ ಹೆಸರನ್ನ ಬದಲಿಸುವಂತೆ ದೇಗುಲ ಮಂಡಳಿ ಪತ್ರ ಬರೆದಿತ್ತು. ಮಂಡ್ಯ ಡಿಸಿ ಮೂಲಕ ಮುಜರಾಯಿ ಇಲಾಖೆ ಆಯುಕ್ತರಿಗೆ ಪತ್ರ ರವಾನೆಯಾಗಿತ್ತು. ಸಲಾಂ ಆರತಿ ಹೆಸರನ್ನ ಬದಲಿಸಬಹುದು ಎಂದು ಡಿಸಿ ಪತ್ರದಲ್ಲಿ ತಮ್ಮ ಅಭಿಪ್ರಾಯ ದಾಖಲಿಸಿದ್ದಾರೆ. ಹಾಗಾಗಿ, ಈ ಸಂಬಂಧ ಮುಜರಾಯಿ ಇಲಾಖೆ ಆಯುಕ್ತರಿಂದ ಅಧಿಕೃತವಾಗಿ ಒಪ್ಪಿಗೆಯ ಆದೇಶ ಹೊರಬೀಳಬೇಕಿದೆ.
ಮೇಲುಕೋಟೆಯಲ್ಲಿ ಶೀಘ್ರವೇ ನಿಲ್ಲಲಿದೆ ದೀವಟಿಗೆ ಸಲಾಂ..!
ಮೇಲುಕೋಟೆಯಲ್ಲಿ ಇನ್ನು ಮುಂದೆ ದೀವಟಿಗೆ ಸಲಾಂ ಬದಲಿಗೆ ಸಂಧ್ಯಾರತಿ ಎಂದು ಮರುನಾಮಕರಣಕ್ಕೆ ಮಂಡ್ಯ ಡಿಸಿ ಶಿಫಾರಸ್ಸು ಮಾಡಿದ್ದಾರೆ. ಮೇಲುಕೋಟೆ ಶ್ರೀಚೆಲುವನಾರಾಯಣ ಸ್ವಾಮಿ ದೇವಾಲಯದಲ್ಲಿ ಪ್ರತಿದಿನ ಸಂಜೆ 7 ಗಂಟೆಗೆ ದೀವಟಿಗೆ ಸಲಾಂ ಆರತಿ ನಡೆಯುತ್ತಿದೆ. ದೀವಟಿಗೆ ಸಲಾಂ ಆರತಿ ಹೆಸರು ಬದಲಿಸುವಂತೆ ಧಾರ್ಮಿಕ ಪರಿಷತ್ತು ಸದಸ್ಯ ನವೀನ್ ಎಂಬುವವರು ಮಂಡ್ಯ ಡಿಸಿಗೆ ಮನವಿ ಸಲ್ಲಿಸಿದ್ದರು.
ಬಳಿಕ ವರದಿ ನೀಡುವಂತೆ ದೇವಾಲಯ ಇಒ ಮತ್ತು ಪಾಂಡವಪುರ ಎಸಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದರು. ದೇವಾಲಯದ ಅರ್ಚಕರು, ಸ್ಥಾನಿಕರು, ಪರಿಚಾರಕರ ಸಮ್ಮುಖದಲ್ಲಿ ಈ ಕುರಿತು ಸಭೆ ನಡೆಸಲಾಗಿತ್ತು. ಸಭೆಯಲ್ಲಿ ಸಲಾಂ ಹೆಸರು ಬದಲಾಯಿಸಿ, ಸಂಧ್ಯಾರತಿ ಎಂದು ಕರೆಯುವಂತೆ ಒಕ್ಕೊರಲ ಅಭಿಪ್ರಾಯ ವ್ಯಕ್ತವಾಗಿತ್ತು. ಅಧಿಕಾರಿಗಳ ಮುಂದೆ ದೇವಾಲಯ ಸ್ಥಾನಿಕರು ಹಾಗೂ ಸಿಬ್ಬಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅದರಂತೆ ದೇವಾಲಯ ಕಾರ್ಯನಿರ್ವಾಹಕ ಅಧಿಕಾರಿ ಸಂಧ್ಯಾರತಿ ಎಂದು ಬದಲಿಸುವಂತೆ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದರು. ವರದಿ ಆಧರಿಸಿ ಮುಜರಾಯಿ ಆಯುಕ್ತರಿಗೆ ಇದೀಗ ಡಿಸಿ ಪತ್ರ ಬರೆದಿದ್ದಾರೆ.