ಮಂಗಳೂರು: ಹಳೆಯಂಗಡಿ ಮೂಲದ ವಿಚ್ಛೇದನಕ್ಕೆ ಸಿದ್ದವಾಗಿದ್ದ 30 ರ ಹರೆಯದ ಮಹಿಳೆಯೊಬ್ಬರಿಗೆ ಸಾಮಾಜಿಕ ತಾಣದಲ್ಲಿ ಪರಿಚಯವಾಗಿದ್ದ ಯುವಕನೊಬ್ಬ ಮಾನಭಂಗ ಮತ್ತು ಹತ್ಯೆಗೆ ಯತ್ನಿಸಿ ಬಂಧನಕ್ಕೊಳಗಾಗಿದ್ದಾನೆ.
ಬಂಟ್ವಾಳದ ಮಂಡಾಡಿ ಹೌಸ್ ಶಿವರಾಜ್ ಕುಲಾಲ್ (28) ಬಂಧಿತ ಆರೋಪಿ.

ಮಹಿಳೆಗೆ ಪತಿಯೊಂದಿಗೆ ಮನಸ್ತಾಪ ಉಂಟಾಗಿ ವಿವಾಹ ವಿಚ್ಛೇದನಕ್ಕಾಗಿ ನ್ಯಾಯಾಲಯದಲ್ಲಿ ಸಲ್ಲಿಸಿದ ಅರ್ಜಿ ವಿಚಾರಣೆಯಲ್ಲಿದೆ. ಈ ಮಧ್ಯೆ ಸುಮಾರು 2 ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣದ ಮುಖಾಂತರ ಶಿವರಾಜ್ ಕುಲಾಲ್ ಪರಿಚಯವಾಗಿ ಅವರಿಬ್ಬರು ಪ್ರೀತಿಸುತ್ತಿದ್ದರು. ಸುಮಾರು 6 ತಿಂಗಳುಗಳಿಂದ ಶಿವರಾಜ್ ಕುಲಾಲ್ ಮಹಿಳೆಗೆ ಮಾನಸಿಕ ಹಿಂಸೆ ನೀಡುವುದು ಮೈಗೆ ಕೈ ಹಾಕಿ ಮಾನ ಭಂಗ ಮಾಡಲು ಪ್ರಯತ್ನಿಸಿದ್ದರಿಂದ ಆತನಿಂದ ದೂರವಾಗಿದ್ದರು ಎನ್ನಲಾಗಿದೆ.
ಈ ನಡುವೆ ಮೇ 17 ರಂದು ಸಂಜೆ ಮಹಿಳೆ ಕೆಲಸ ಮಾಡುತ್ತಿದ್ದ ಬಳ್ಳಾಲ್ ಬಾಗ್ ನ ಕಂಪೆನಿಗೆ ಆರೋಪಿ ಶಿವರಾಜ್ ಕುಲಾಲ್ ಬಂದು ಕೆಲಸ ಮುಗಿಸಿಕೊಂಡುಹೋಗುತ್ತಿದ್ದ ಮಹಿಳೆಯನ್ನು ಬೈದು, ಹೊಡೆದು ಕುತ್ತಿಗೆಯನ್ನು ಹಿಡಿದು ಕೊಲೆ ಮಾಡಲು ಪ್ರಯತ್ನಿಸಿರುತ್ತಾನೆ ಎಂದು ದೂರಿನಲ್ಲಿ ದಾಖಲಾಗಿದೆ.