ಪುತ್ತೂರು: ಸಂಬಂಧಿಕರ ನಡುವೆ ಜಗಳ ನಡೆದು ಇತ್ತಂಡಗಳು ಆಸ್ಪತ್ರೆಗೆ ದಾಖಲಾಗಿ, ಠಾಣೆಗೆ ದೂರು ನೀಡಿರುವ ಘಟನೆ ಪುತ್ತೂರು ಉರ್ಲಾಂಡಿಯಲ್ಲಿ ನಡೆದಿದೆ.
ಉರ್ಲಾಂಡಿ ನಿವಾಸಿ ತಿರುಮಲಾಕ್ಷ ಎಂಬವರು ರಕ್ಷಿತ್ ಹೆಗ್ಡೆ ಮತ್ತು ಶರತ್ ಎಂಬವರ ವಿರುದ್ಧ ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದು, ಅದೇ ರೀತಿ ರಕ್ಷಿತ್ ಹೆಗ್ಡೆ ಮತ್ತು ಆತನ ಸಹೋದರಿಗೆ ತಿರುಮಲಾಕ್ಷ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಅವರು ಠಾಣೆಗೆ ದೂರು ನೀಡಿದ್ದಾರೆ.
ತಿರುಮಲಾಕ್ಷ ಎಂಬವರಿಗೆ ಅವರ ಸಂಬಂಧಿ ರಕ್ಷಿತ್ ಎಂಬಾತ ಅವಾಚ್ಯ ಶಬ್ದಗಳಿಂದ ಬೈದು ಮನೆಯ ಒಳಗೆ ಅಕ್ರಮ ಪ್ರವೇಶ ಮಾಡಿ ವಸ್ತುಗಳನ್ನು ಹಾಗೂ ಹೊರಗಡೆ ನಿಲ್ಲಿಸಿದ್ದ ಕಾರಿಗೆ ಹಾನಿ ಮಾಡಿ, ತಿರುಮಲಾಕ್ಷ ಮತ್ತು ಅವರ ತಂದೆಯ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ, ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಠಾಣೆಗೆ ದೂರು ನೀಡಿದ್ದಾರೆ.
ಅದೇ ರೀತಿ ರಕ್ಷಿತ್ ಹೆಗ್ಡೆ ಸಹೋದರಿಯ ಮನೆಗೆ ತೆರಳಿ ತಿರುಮಲಾಕ್ಷ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ, ಯುವತಿ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಠಾಣೆಗೆ ದೂರು ನೀಡಿದ್ದು, ಅದೇ ರೀತಿ ರಕ್ಷಿತ್ ಹೆಗ್ಡೆ ಕೂಡಾ ಆಸ್ಪತ್ರೆಗೆ ದಾಖಲಾಗಿ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.