ಉಡುಪಿ: ಬೆಂಗಳೂರು ಆರ್ ಟಿ ನಗರದ ಯುವಜೋಡಿಗಳು ಉಡುಪಿಯ ಮಂದಾರ್ತಿ ಸಮೀಪದ ಹೆಗ್ಗುಂಜೆಯಲ್ಲಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮುಂಜಾನೆ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಸ್ಥಳೀಯರು ಬೆಂಕಿ ನಂದಿಸಿದಾಗ ಕಾರಿನೊಳಗೆ ಯುವಜೋಡಿಗಳು ಶವವಾಗಿ ಪತ್ತೆಯಾಗಿದ್ದಾರೆ.

ಜ್ಯೋತಿ ಚೋಳನಾಯಕನಹಳ್ಳಿ ನಿವಾಸಿಯಾಗಿದ್ದಾರೆ, ಯಶವಂತ್ ಯಾದವ್ ಮುನಿಯಪ್ಪ ಲೇಔಟ್ ನಿವಾಸಿ. ಮೇ 19 ರಂದು ಹುಡುಗಿ ಪೋಷಕರು ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದಾರೆ. ಇನ್ನು ಯುವಕನ ಪೋಷಕರು ಮೇ 20ಕ್ಕೆ ದೂರು ದಾಖಲಿಸಿದ್ದರು.
ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಯುವತಿಯ ತಾಯಿಯಿಂದ ದೂರು:
ಯಶವಂತ್(23) ಮತ್ತು ಜ್ಯೋತಿ(23) ಆತ್ಮಹತ್ಯೆ ಮಾಡಿಕೊಂಡಿರುವ ಯುವಜೋಡಿಗಳು. ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಯುವತಿಯ ತಾಯಿ ತಮ್ಮ ಮಗಳು ಇಂಟರ್ವ್ಯೂಗೆ ಹೋಗುತ್ತೇನೆ ಎಂದವಳು ವಾಪಸ್ ಬಂದಿರುವುದಿಲ್ಲ ಎಂದು ದೂರು ನೀಡಿದ್ದಾರೆ. ಆಕೆಯನ್ನು ಪತ್ತೆಹಚ್ಚಿ ಕೊಡುವಂತೆ ಪೊಲೀಸರಲ್ಲಿ ತಾಯಿ ದೂರು ನೀಡಿದ್ದರು ಈ ದೂರಿನ ಮೇರೆಗೆ ಪೊಲೀಸ್ ಮಿಸ್ಸಿಂಗ್ ಕೇಸ್ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಯುವಕ ಯಶವಂತ ನಾಪತ್ತೆಯಾಗಿರುವ ದೂರು ಕೂಡ ದಾಖಲು
ಅದೇ ರೀತಿ 20ನೇ ತಾರೀಖಿನಂದು ಯುವಕ ಯಶವಂತ ನಾಪತ್ತೆಯಾಗಿರುವ ದೂರು ಕೂಡ ದಾಖಲಾಗಿದೆ. ಟ್ಯಾಲಿ ಕ್ಲಾಸಿಗೆ ತೆರಳುತ್ತೇನೆ ಎಂದು ಮನೆಯಿಂದ ಹೋಗಿದ್ದ ಯುವಕ ಮರಳಿ ಮನೆ ಕಡೆ ಬರಲಿಲ್ಲ ಎಂದು ಯುವಕನ ತಂದೆ ಠಾಣೆಯಲ್ಲಿ ದೂರು ನೀಡಿದ್ದಾರೆ. ಯಶವಂತ್ ಮತ್ತು ಜ್ಯೋತಿ ಇದೇ ತಿಂಗಳು 18ರ ಮಧ್ಯಾಹ್ನ ಮನೆಯಿಂದ ತೆರಳಿದ್ದಾರೆ.
ಹುಸೇನ್ ಎಂಬವರಿಂದ ಸ್ವಿಫ್ಟ್ ಕಾರ್ ಬಾಡಿಗೆಗೆ ಪಡೆದಿದ್ದರು:
ಮೃತ ಯುವಜೋಡಿಗಳು ಮೇ 21 ನೇ ತಾರೀಖಿನಂದು ಮಂಗಳೂರಿಗೆ ಬಂದು ಹುಸೇನ್ ಎಂಬವರಿಂದ ಸ್ವಿಫ್ಟ್ ಕಾರ್ ಬಾಡಿಗೆಗೆ ಪಡೆದಿದ್ದರು. ಅದೇ ರೀತಿ ಅದೇ ಕಾರಿನಲ್ಲಿ ಉಡುಪಿಗೆ ಬಂದಿದ್ದ ಜೋಡಿ ಇಂದು ಶವವಾಗಿ ಪತ್ತೆಯಾಗಿರುವುದು ಸಂಶಯಾಸ್ಪದವಾಗಿದೆ. ಸಾವು ನಿಗೂಢವಾಗಿದ್ದು ಯಾವ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಇನ್ನೂ ತಿಳಿದುಬಂದಿಲ್ಲ ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.