ಪಾಪುಲರ್ ಫ್ರಂಟ್ ಆಫ್ ಇಂಡಿಯಾ (PFI) ಪ್ರತಿಭಟನಾ ಮೆರವಣಿಗೆ ವೇಳೆ ಬಾಲಕನೊಬ್ಬ ಪ್ರಚೋದನಕಾರಿ ಘೋಷಣೆ ಕೂಗಿದ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದೆ ಎಂದು ಕೇರಳ ರಾಜ್ಯದ ತಿರುವನಂತಪುರಂ ಪೊಲೀಸರು ತಿಳಿಸಿದ್ದಾರೆ.
ಈ ವಿಡಿಯೋ ನಮಗೆ ಭಾನುವಾರವಷ್ಟೇ ಗಮನಕ್ಕೆ ಬಂದಿದೆ. ಹೀಗಾಗಿ, ಈ ಕುರಿತಾಗಿ ಸಮಗ್ರ ತನಿಖೆ ನಡೆಸಿ ಘಟನೆಯ ಸತ್ಯಾಸತ್ಯತೆ ಪರಿಶೀಲಿಸೋದಾಗಿ ಪೊಲೀಸರು ತಿಳಿಸಿದ್ದಾರೆ.
ಪಿಎಫ್‌ಐ ಪ್ರತಿಭಟನಾ ಮೆರವಣಿಗೆ ವೇಳೆ ಬಾಲಕನೊಬ್ಬ ಪ್ರಚೋದನಕಾರಿ ಘೋಷಣೆಯನ್ನು ಕೂಗುತ್ತಾ ಸಾಗಿದ ಎಂದು ಆರೋಪಿಸಲಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
‘ಹಿಂದೂಗಳು ತಮ್ಮ ಅಂತ್ಯಕ್ರಿಯೆಗೆ ಅಕ್ಕಿ ರೆಡಿ ಮಾಡಿ ಇಟ್ಟುಕೊಳ್ಳಿ, ಕ್ರೈಸ್ತರು ತಮ್ಮ ಅಂತಿಮ ಯಾತ್ರೆಗೆ ಸಾಂಬ್ರಾಣಿ, ಧೂಪ ರೆಡಿ ಮಾಡಿ ಇಟ್ಟುಕೊಳ್ಳಿ. ನೀವು ಯೋಗ್ಯ ರೀತಿಯಿಂದ ಬದುಕಿದರೆ ನಮ್ಮ ಭೂಮಿಯಲ್ಲಿ ಬದುಕಬಹುದು, ಒಂದು ವೇಳೆ ನೀವು ನ್ಯಾಯವಾಗಿ ಬದುಕದಿದ್ದರೆ ನಮಗೆ ಆಜಾದಿ ಅಂದರೆ ಏನು ಎಂದು ಗೊತ್ತು’ ಈ ರೀತಿ ಬಾಲಕ ಹೇಳುವ ಘೋಷಣೆಯನ್ನು ಪ್ರತಿಭಟನಾ ಮೆರವಣಿಗೆಯಲ್ಲಿ ಸಾಗುವ ಯುವಕರೂ ಕೂಡಾ ಪುನರುಚ್ಛರಿಸುತ್ತಾರೆ ಎನ್ನಲಾಗಿದೆ.
ಪಿಎಫ್‌ಐ ಮೂಲಗಳ ಪ್ರಕಾರ, ಈ ಪ್ರತಿಭಟನಾ ಮೆರವಣಿಗೆಯು ಶನಿವಾರ ಅಲಪ್ಪುಳದಲ್ಲಿ ನಡೆದಿದೆ. ಅವರು ಪ್ರತಿಭಟನಾ ಮೆರವಣಿಗೆ ವೇಳೆ ಅಧಿಕೃತ ಘೋಷಣೆಯನ್ನೂ ಸಿದ್ದಪಡಿಸಿದ್ದರು ಎನ್ನಲಾಗಿದೆ.
ಆದ್ರೆ, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಘೋಷಣೆಯು ನಮ್ಮದಲ್ಲ ಎಂದು ಪಿಎಫ್‌ಐ ಅಧಿಕೃತ ಮೂಲಗಳು ತಿಳಿಸಿವೆ. ತಮ್ಮ ಪ್ರತಿಭಟನಾ ಮೆರವಣಿಗೆ ವೇಳೆ ಬೇರೆ ಬೇರೆ ಪ್ರದೇಶಗಳಿಂದ ನೂರಾರು ಸಂಖ್ಯೆಯ ಜನರು ಆಗಮಿಸಿದ್ದರು. ಈ ವೇಳೆ ಕೇಳಿ ಬಂದ ಈ ಘೋಷಣೆಯನ್ನು ನಮ್ಮ ಸ್ವಯಂ ಸೇವಕರು ಗಮನಿಸಿದ್ದಾರೆ. ಕೂಡಲೇ ಈ ರೀತಿ ಘೋಷಣೆ ಹಾಕೋದನ್ನ ತಡೆಯಲಾಗಿದೆ ಎಂದು ಪಿಎಫ್‌ಐ ಮೂಲಗಳು ತಿಳಿಸಿವೆ. ಈ ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.