ಹುಬ್ಬಳ್ಳಿ: ಜಿಲ್ಲೆಯಲ್ಲಿ ನಡೆದ ಕ್ರೂಸರ್ ದುರಂತ ಬೆನ್ನಲ್ಲೇ ಹುಬ್ಬಳ್ಳಿ ಬಳಿ ಮತ್ತೊಂದು ಅಪಘಾತ ಸಂಭವಿದೆ. ಖಾಸಗಿ ಬಸ್ ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, 7 ಮಂದಿ ಸಾವನ್ನಪ್ಪಿದ್ದು, 26 ಜನರು ಗಾಯಗೊಂಡಿದ್ದಾರೆ.

ಪೂನಾ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ತಾರಿಹಾಳ ಬೈಪಾಸ್ ರಸ್ತೆಯಲ್ಲಿ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ 6 ಮಂದಿ ಸಾವನ್ನಪ್ಪಿದ್ದರೇ, ಚಿಕಿತ್ಸೆ ಫಲಿಸಲಾರದೇ ಆಸ್ಪತ್ರೆ ಓರ್ವ ಸಾವನ್ನಪ್ಪಿದ್ದಾನೆ. ತಡರಾತ್ರಿ ಅಪಘಾತ ಸಂಭವಿಸಿದೆ.

ನ್ಯಾಷನಲ್ ಟ್ರಾವೆಲ್ಸ್ ಗೆ ಸೇರಿದ ಬಸ್ ಹಾಗೂ ಕೊಲ್ಲಾಪುರದಿಂದ ಅಕ್ಕಿ ತುಂಬಿಕೊಂಡು ಬರುತ್ತಿದ್ದ ಲಾರಿ ನಡುವೆ ಅಪಘಾತ ಸಂಭವಿಸಿದೆ.
ಅಪಘಾತ ರಭಸಕ್ಕೆ ಲಾರಿ ಡ್ರೈವರ್, ಕ್ಲೀನರ್ ಹಾಗೂ ಬಸ್ ನಲ್ಲಿದ್ದ ನ್ಯಾಷನಲ್ ಟ್ರಾವಲ್ಸ್ ಚಾಲಕರಾದ ಅತಾವುಲ್ಲಾ ಹಾಗೂ ನಾಗರಾಜ ಎಂಬವರು ಸೇರಿ ಏಳು ಜನ ಸಾವನ್ನಪ್ಪಿದ್ದು, ಗಾಯಾಳುಗಳಿಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸ್ಥಳಕ್ಕೆ ಹುಬ್ಬಳ್ಳಿ ಕಿಮ್ಸ್ ಗೆ ಪೊಲೀಸ್ ಆಯುಕ್ತ ಲಾಭೂರಾಮ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹುಬ್ಬಳ್ಳಿ ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು, ಅಪಘಾತ ನಡೆಯುತ್ತಿದ್ದಂತೆ ಧಾರವಾಡದಿಂದ ಬರುತ್ತಿದ್ದ ಟ್ರ್ಯಾಕ್ಟರ್ ಮೇಲೆ ಲಾರಿ ವಾಲಿದ್ದು, ಕೂಡಲೇ ಟ್ರ್ಯಾಕ್ಟರ್ ಚಾಲಕ ಅದೃಷ್ಠವಶಾತ್ ಘಟನೆಯಲ್ಲಿ ಪ್ರಾಣಾಪಾಯದಿಂದ ಪರಾಗಿದ್ದಾರೆ.