ಮಂಗಳೂರು: ಗುರುಪುರ ಬಳಿಯ ಮಳಲಿ ಜುಮ್ಮಾ ಮಸೀದಿ ಹಿಂದಿನ ಕಾಲದಲ್ಲಿ ದೇವಸ್ಥಾನ ಆಗಿತ್ತೇ ಎನ್ನುವ ಬಗ್ಗೆ ಹಿಂದೂ ಸಂಘಟನೆಗಳು ತಾಂಬೂಲ ಪ್ರಶ್ನೆ ನಡೆಸುತ್ತಿದ್ದು, ಕೇರಳದ ಖ್ಯಾತ ಜ್ಯೋತಿಷಿ ಜಿ.ಪಿ.ಗೋಪಾಲಕೃಷ್ಣ ಪಣಿಕ್ಕರ್ ನೇತೃತ್ವದಲ್ಲಿ ಜ್ಯೋತಿಷ್ಯ ಚಿಂತನೆ ಆರಂಭಗೊಂಡಿದೆ.

ಸ್ಥಳೀಯ ಉಳಿಪ್ಪಾಡಿ ಗುತ್ತಿನ ಉದಯ ಕುಮಾರ್ ಶೆಟ್ಟಿ ತಾಂಬೂಲ ಪ್ರಶ್ನೆಯ ಯಜಮಾನಿಕೆ ವಹಿಸಿಕೊಂಡಿದ್ದು, ಜ್ಯೋತಿಷಿಗಳಿಗೆ 9 ವೀಳ್ಯದೆಲೆಗಳನ್ನು ನೀಡಿ ತಾಂಬೂಲ ಪ್ರಶ್ನೆ ಕೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಜ್ಯೋತಿಷಿ, ಈ ತಾಂಬೂಲಕ್ಕೆ ಗುರುಬಲ ಇದೆ. ಮೂರು ಆರೂಢದಲ್ಲಿ ಗುರುಬಲ ಇಲ್ಲ. ಸದ್ರಿ ಜಾಗ ಮೇಲ್ನೋಟಕ್ಕೆ ದೇವಸ್ಥಾನ ಇದ್ದ ಭೂಮಿ ಎನ್ನುವುದು ತಿಳಿದುಬರುತ್ತಿದೆ. ಯಾವ ದೇವ ಸಾನ್ನಿಧ್ಯ ಎಂದು ತಿಳಿಯಬೇಕಿದೆ ಎಂದು ಕವಡೆ ಕಾಯಿ ಉರುಳಿಸಿದರು. ಆನಂತರ ಎರಡು ಬಾರಿ ಕವಡೆ ಕಾಯಿ ಹಾಕಿದ ಜ್ಯೋತಿಷಿಗಳು, ಸಾಮಾನ್ಯ ತಾಂಬೂಲ ಪ್ರಶ್ನೆ ಮೂಲಕ ಯಾವ ದೈವ ಸಾನ್ನಿಧ್ಯ ಅಂತ ಹೇಳಲು ಸಾಧ್ಯವಿಲ್ಲ. ಇಲ್ಲಿ ದೇವಸ್ಥಾನ ಇತ್ತೇ ಅಥವಾ ದೈವಸ್ಥಾನ ಇತ್ತೇ ಎನ್ನುವ ಬಗ್ಗೆ ಮುಂದೆ ಚಿಂತನೆ ನಡೆಸಬೇಕಿದೆ. ಈ ಜಾಗದಲ್ಲಿ ಹಿಂದೆ ಮಠ, ಆರಾಧನೆ ಇದ್ದಿರುವ ಬಗ್ಗೆ ಕಂಡುಬರುತ್ತಿದೆ. ಅದು ದೈವಸಾನ್ನಿಧ್ಯ ಇದ್ದ ಭೂಮಿ ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ. ಸಾನ್ನಿಧ್ಯ ಸಂಪೂರ್ಣವಾಗಿ ನಾಶ ಆಗಿಲ್ಲ. ಪೂರ್ವ ಕಾಲದಲ್ಲಿ ಮಠದ ರೀತಿಯ ಪ್ರದೇಶ ಆಗಿತ್ತು. ಮಠ ನಾಶ ಆಗಲು ಜೀವ ಹಾನಿಯಾಗಿರೋದು ಕಾರಣವಾಗಿರಬಹುದು. ದೋಷಗಳಿಗೆ ಮೊದಲು ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಜ್ಯೋತಿಷ್ಯ ಚಿಂತನೆ ನಡೆಸಿದ ಗೋಪಾಲಕೃಷ್ಣ ಪಣಿಕ್ಕರ್ ಹೇಳಿದರು.

ಯಾವುದೋ ಒಂದು ಕಾಲದಲ್ಲಿ ನಾಶವಾದ ಭೂಮಿಗೆ ಈಗ ಅಭಿವೃದ್ಧಿಯಾಗುವ ಸಮಯ ಬಂದಿದೆ. ಯಾವುದೋ ವಿವಾದದಿಂದ ಭೂಮಿ ನಾಶವಾಗಿದೆ. ಸ್ಥಳ ಸಾನ್ನಿಧ್ಯದ ವಿವಾದದ ಸಂದರ್ಭದಲ್ಲಿ ಕೆಲ ಶಕ್ತಿಗಳು ಬಿಟ್ಟು ಹೋಗಿದ್ದರೂ, ಸದ್ರಿ ಜಾಗದಲ್ಲಿ ಇನ್ನೂ ಶಕ್ತಿಗಳು ನೆಲೆಸಿವೆ. ಅಲ್ಲಿ ಅಭಿವೃದ್ಧಿ ಆಗದಿದ್ದರೆ ಊರಿಗೇ ಸಮಸ್ಯೆಗಳು ಬರುತ್ತದೆ. ಎಲ್ಲರೂ ಒಗ್ಗಟ್ಟಾಗಿ ಮುಂದುವರಿಸಬೇಕಿದೆ ಎಂದು ಜ್ಯೋತಿಷ್ಯ ಚಿಂತನೆಯಲ್ಲಿ ಪಣಿಕ್ಕರ್ ಹೇಳಿದರು.

ತಾಂಬೂಲ ಪ್ರಶ್ನೆ ಇಡುವುದಕ್ಕೂ ಮೊದಲು ಹಿಂದು ಸಂಘಟನೆಯ ನಾಯಕರು ಪೊಳಲಿ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಆನಂತರ, 9 ಗಂಟೆ ವೇಳೆಗೆ ತಾಂಬೂಲ ಪ್ರಶ್ನೆ ಕೇಳಲು ಗುರುಪುರ ಬಳಿಯ ರಾಮಾಂಜನೇಯ ಭಜನಾ ಮಂದಿರಕ್ಕೆ ಆಗಮಿಸಿದ್ದರು. ಸ್ಥಳೀಯ ಪ್ರಮುಖರು, ಹಿಂದು ಸಂಘಟನೆಗಳ ಪ್ರಮುಖರಾ ಶರಣ್ ಪಂಪ್ವೆಲ್, ಸುನಿಲ್ ಕೆ.ಆರ್ ಮತ್ತಿತರರು ಉಪಸ್ಥಿತರಿದ್ದಾರೆ. ಮಳಲಿ ಪರಿಸರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದು, ಮಸೀದಿ ಆಸುಪಾಸಿನಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ.