ನವದೆಹಲಿ: ದೇಶದಲ್ಲಿ ಮತ್ತೆ ಕೊರೊನಾ ಸೋಂಕು ಉಲ್ಬಣಿಸುತ್ತಿರುವ ಹಿನ್ನೆಲೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಬೇರೆ ದೇಶಗಳಿಗೆ ಕೊರೊನಾ ವ್ಯಾಕ್ಸಿನ್ ರಫ್ತು ಕಾರ್ಯಕ್ಕೆ ತಾತ್ಕಾಲಿಕ ತಡೆ ನೀಡಿದೆ.
ಮಹಾರಾಷ್ಟ್ರ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ಭಾರತದಲ್ಲಿ ಕೊರೊನಾ ಲಸಿಕೆಯ ಅಗತ್ಯತೆ ಗಮನಿಸಿದ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಉತ್ಪಾದನೆಯಾಗ್ತಿರೋ ಆಸ್ಟ್ರಾಝೆನೆಕಾ ಲಸಿಕೆಯ ಎಲ್ಲಾ ಮೇಜರ್ ಎಕ್ಸ್ಪೋರ್ಟ್ಗೆ ತಡೆ ನೀಡಲಾಗಿದೆ. ಈ ನಿರ್ಧಾರದಿಂದ ವಿಶ್ವ ಆರೋಗ್ಯ ಸಂಸ್ಥೆಯ ಕೋವ್ಯಾಕ್ಸ್ ಯೋಜನೆಯಡಿ ಕಳುಹಿಸಬೇಕಿದ್ದ ವ್ಯಾಕ್ಸಿನ್ ರಫ್ತಿನ ಮೇಲೂ ಪರಿಣಾಮ ಬೀರಲಿದೆ.
ಕೋವ್ಯಾಕ್ಸ್ ನಿಯಮದಡಿ ಪಾಕಿಸ್ತಾನ ಸೇರಿದಂತೆ ಅನೇಕ ರಾಷ್ಟ್ರಗಳಿಗೆ ಭಾರತ ವ್ಯಾಕ್ಸಿನ್ ರಫ್ತು ಮಾಡಿತ್ತು. ಆದರೆ ದೇಶದಲ್ಲಿ ಕಳೆದ 24 ಗಂಟೆಯಲ್ಲಿ 50,000ಕ್ಕೂ ಹೆಚ್ಚು ಕೇಸ್ ದಾಖಲಾಗಿದೆ. ಈ ಎಲ್ಲಾ ವಿಚಾರವನ್ನು ಗಮನಿಸಿದ ಕೇಂದ್ರ ಈ ಮಹತ್ವ ನಿರ್ಧಾರ ತೆಗೆದುಕೊಂಡಿದೆ. ದೇಶದಲ್ಲಿ ಲಸಿಕೆ ಉತ್ಪಾದನೆ ವೇಗ ಪಡೆದುಕೊಂಡಿದ್ದು, ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೂ ಲಸಿಕೆ ರವಾನಿಸುತ್ತಿದೆ. ನಿನ್ನೆ ತಡರಾತ್ರಿ ಕರ್ನಾಟಕ್ಕೂ ಕೂಡ ಕೇಂದ್ರ 4 ಲಕ್ಷ ಡೋಸ್ ಲಸಿಕೆ ರವಾನಿಸಿದೆ.