ಡೆಹ್ರಾಡೂನ್: ಈ ಬಾರಿಯ ಕುಂಭಮೇಳಕ್ಕೆ ಭಾಗವಹಿಸಲು ಆಗಮಿಸುವಂತಹ ಭಕ್ತರಿಗೆ 72 ಗಂಟೆಗಳ ಒಳಗಿನ ಕೋವಿಡ್ ನೆಗೆಟಿವ್ ಟೆಸ್ಟ್ ರಿಪೋರ್ಟ್ ಕಡ್ಡಾಯ ಎಂದು ಉತ್ತರಾಖಂಡದ ಸರ್ಕಾರ ಆದೇಶ ಹೊರಡಿಸಿದೆ. ಉತ್ತರಾಖಂಡದಲ್ಲಿ ಮತ್ತೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಕಳೆದ ಒಂದೇ ದಿನ 200 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿತ್ತು. ಹಾಗಾಗಿ ಹರಿದ್ವಾರದಲ್ಲಿ ನಡೆಯಲಿರುವ ಈ ಬಾರಿಯ ಕುಂಭಮೇಳಕ್ಕೆ ಬರುವ ಭಕ್ತರಿಗೆ 72 ಗಂಟೆಗಳ ಒಳಗಿನ ಕೊರೊನಾ ನೆಗೆಟಿವ್ ಟೆಸ್ಟ್ ಕಡ್ಡಾಯಗೊಳಿಸಲಾಗಿದೆ.
ಈಗಾಗಲೇ ಹರಿದ್ವಾರದಲ್ಲಿ ಕುಂಭಮೇಳಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಎಪ್ರಿಲ್ 1 ರಿಂದ ಕುಂಭಮೇಳ ಆರಂಭವಾಗುತ್ತಿದೆ. ಈ ನಡುವೆ ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಕಳೆದ ಒಂದೇ ದಿನ ಹರಿದ್ವಾರದಲ್ಲಿ 71, ಡೆಹ್ರಾಡೂನ್ 63, ನೈನಿತಾಲ್ 22 ಮತ್ತು ಇತರ ನಗರಗಳಲ್ಲಿ ಹೊಸ ಕೊರೊನಾ ಕೇಸ್ ಪತ್ತೆಯಾಗಿದೆ.
ಕುಂಭಮೇಳಕ್ಕೆ ಆಗಮಿಸುವ ಭಕ್ತರು 72 ಗಂಟೆಗಳ ಒಳಗಿನ ಕೋವಿಡ್ ನೆಗೆಟಿವ್ ವರದಿ ಅಥವಾ ಕೊರೊನಾ ಲಸಿಕೆ ಪಡೆದುಕೊಂಡ ವರದಿಯನ್ನು ಸಲ್ಲಿಸಿ ಕುಂಭಮೇಳದಲ್ಲಿ ಪಾಲ್ಗೊಳ್ಳುವಂತೆ ಉತ್ತರಾಖಂಡದ ಹೈಕೋರ್ಟ್ ಆದೇಶ ಹೊರಡಿಸಿರುವುದಾಗಿ ಕುಂಭಮೇಳದ ಮುಖ್ಯ ಕಾರ್ಯದರ್ಶಿ ಓಂ ಪ್ರಕಾಶ್ ಸ್ಥಳೀಯ ಮಾಧ್ಯಮದೊಂದಿಗೆ ಸ್ಪಷ್ಟಪಡಿಸಿದ್ದಾರೆ.