ಮಂಗಳೂರು : ಮಂಗಳೂರು ಹೊರವಲಯದ ಉಳ್ಳಾಲ ನೇತ್ರಾವತಿ ಸೇತುವೆಯಲ್ಲಿ ಕಾರು – ಆಟೋ ರಿಕ್ಷಾ ಡಿಕ್ಕಿಯಾಗಿ ಆಟೋ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಮುಂಜಾನೆ ನಡೆದಿದೆ. ಮಂಗಳೂರು ನಗರದಿಂದ ಉಳ್ಳಾಲ ತೊಕ್ಕೊಟ್ಟಿಗೆ ಹೋಗುತ್ತಿದ್ದ ಆಟೋ ರಿಕ್ಷಾಗೆ ಹಿಂದಿನಿಂದ ವೇಗವಾಗಿ ಬಂದ ಕೇರಳ ನೊಂದಣಿಯ ಕಾರು ಡಿಕ್ಕಿಯಾಗಿದ್ದು ಪರಿಣಾಮ ಅಟೋ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತರನ್ನು ಪಜೀರು ಸೇನೆರೆಬೈಲು ನಿವಾಸಿ ಸಂಜೀವ ಪೂಜಾರಿ ಎಂಬವರ ಪುತ್ರ ಶ್ಯಾಮ್ ಪ್ರಸಾದ್ (45) ಎಂದು ಗುರುತ್ತಿಸಲಾಗಿದೆ. ಬೆಳಿಗ್ಗೆ ಮನೆ ಸಮೀಪದ ಬಾಡಿಗೆ ಇತ್ತೆಂದು ಮನೆಯಲ್ಲಿ ತಿಳಿಸಿ ಮಂಗಳೂರಿಗೆ ತೆರಳಿದ್ದರು. ಅಲ್ಲಿಂದ ವಾಪಸ್ಸಾಗುವ ಸಂದರ್ಭ ಕಾರು ಡಿಕ್ಕಿ ಹೊಡೆದಿದೆ. ಪಡೀಲ್ ಕಣ್ಣೂರಿನಿಂದ ತಲಪಾಡಿ ಶಾರದಾ ವಿದ್ಯಾ ಸಂಸ್ಥೆಗೆ ಸಹೋದರನನ್ನು ಬಿಡಲು ಬರುತ್ತಿದ್ದ ಕಾರು ಚಾಲಕ ರಿಕ್ಷಾಗೆ ಡಿಕ್ಕಿ ಹೊಡೆದಿದ್ದಾನೆ.
ರಿಕ್ಷಾದ ಹಿಂಬದಿಗೆ ಕಾರು ಡಿಕ್ಕಿ ಹೊಡೆಯುತ್ತಿದ್ದಂತೆ , ಸೇತುವೆಯ ಬದಿಯಲ್ಲಿ ಅಳವಡಿಸಿದ ಗಿಂಡಿಗೆ ರಿಕ್ಷಾ ತಗಲಿ ಚಾಲಕ ಹೊರಗೆಸೆಯಲ್ಪಟ್ಟು, ಅವರ ಮೇಲೆ ಕಾರು ಚಲಿಸಿದ ಪರಿಣಾಮ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ಅಸೈಗೋಳಿ ರಿಕ್ಷಾ ಪಾರ್ಕಿನಲ್ಲಿ ರಿಕ್ಷಾ ಚಲಾಯಿಸುತ್ತಿದ್ದ ಶ್ಯಾಮಪ್ರಸಾದ್ ಕುಟುಂಬದ ಆಧಾರಸ್ತಂಭವಾಗಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಜಮಾಯಿಸಿದ ಉದ್ರಿಕ್ತರು ಕಾರು ಚಾಲಕನಿಗೆ ಹಲ್ಲೆಗೆ ಮುಂದಾಗಿದ್ದು ಮಾಹಿತಿ ಪಡೆದ ಸಂಚಾರಿ ಪೊಲೀಸರು ಸ್ಥಳಕ್ಕೆ ಧಾವಿಸಿ ಜನರನ್ನು ಚದುರಿಸಿ ಆಟೋ ರಿಕ್ಷಾ ಚಾಲಕನ ದೇಹವನ್ನು ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ.