ಅಮರಾವತಿ: ಮಹಾರಾಷ್ಟ್ರದ ಹರಿಸಾಲ್ ನ ರೇಂಜ್ ಅರಣ್ಯ ಅಧಿಕಾರಿ ದೀಪಾಲಿ ಚೌಹಾಣ್ ಮೊಹೈತ್ ಅವರು ಆತ್ಮಹತ್ಯೆ ಶರಣಾಗಿದ್ದಾರೆ. ಇವರು ‘ಲೇಡಿ ಸಿಂಗಂ’ ಮತ್ತು ‘ಮೆಲ್ಘಾಟ್ನ ಸಿಂಗಂ’ ಎಂದು ಜನಪ್ರಿಯರಾಗಿದ್ದರು. 33 ವರ್ಷದ ಆರ್ಎಫ್ಒ ದೀಪಾಲಿ ಅವರು ಹರಿಸಾಲ್ ಗ್ರಾಮದಲ್ಲಿರುವ ಹೆಡ್ಕ್ವಾಟ್ರಸ್ನಲ್ಲಿ ತಮ್ಮ ಸರ್ವೀಸ್ ರಿವಾಲ್ವರ್ನಿಂದ ತಲೆಗೆ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿದ್ದು, ಡೆತ್ನೋಟ್ ನಲ್ಲಿ ಭಾರತೀಯ ಅರಣ್ಯಾಧಿಕಾರಿ (ಐಎಫ್ಎಸ್)ಯಾಗಿರುವ ವಿನೋದ್ ಶಿವಕುಮಾರ್ರನ್ನು ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಉಲ್ಲೇಖಿಸಿದ್ದಾರೆ.
ಆತ್ಮಹತ್ಯೆ ಸಮಯದಲ್ಲಿ ದೀಪಾಲಿ ಅವರ ತಾಯಿ ಸತಾರಾದಲ್ಲಿದ್ದರು ಮತ್ತು ಆಕೆಯ ಪತಿ ಕೆಲಸದಲ್ಲಿದ್ದರು. ಡೆತ್ನೋಟ್ನಲ್ಲಿ ಉಲ್ಲೇಖವಾಗಿರುವ ಆರೋಪಿ ವಿರುದ್ಧ ಕ್ರಮ ತೆಗೆದುಕೊಳ್ಳುವವರೆಗೂ ಅಂತ್ಯಕ್ರಿಯೆ ನಡೆಸುವುದಿಲ್ಲ ಎಂದು ದೀಪಾಲಿ ಸಂಬಂಧಿಕರು ಒತ್ತಾಯಿಸಿದ್ದರು. ಈ ಎಲ್ಲಾ ಬೆಳವಣಿಗೆ ಹಿನ್ನಲೆಯಲ್ಲಿ ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ನಾಗಪುರ ರೈಲ್ವೆ ನಿಲ್ದಾಣದಲ್ಲಿ ಗುಗಮಾಲ್ ಅರಣ್ಯ ಸಂರಕ್ಷಣಾಧಿಕಾರಿ (ಡಿವೈಸಿಎಫ್) ವಿನೋದ್ ಶಿವಕುಮಾರ್ ಅವರನ್ನು ಅಮಾನತುಗೊಳಿಸಿದೆ.
ಆತ್ಮಹತ್ಯೆಗೆ ಶರಣಾದ ಸುದ್ದಿ ತಿಳಿಯುತ್ತಿದ್ದಂತೆ, ಶಿವಕುಮಾರ್ ಅವರು ಪರಾಟ್ವಾಡಾಗೆ ತೆರಳಿ, ತಮ್ಮ ಕಾರನ್ನು ಅಲ್ಲಿಯೇ ಬಿಟ್ಟು, ಟ್ಯಾಕ್ಸಿ ಯಲ್ಲಿ ನಾಗ್ಪುರ ರೈಲ್ವೆ ನಿಲ್ದಾಣಕ್ಕೆ ತೆರದ್ದಾರೆ. ಬೆಂಗಳೂರಿಗೆ ತೆರಳಲೆಂದು ರೈಲು ನಿಲ್ದಾಣದಲ್ಲಿ ಇರುವಾಗ ಪೊಲೀಸರು ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಮರಾವತಿ ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ಡಾ. ಹರಿ ಬಾಲಾಜಿ ಎನ್ ಮಾಹಿತಿ ನೀಡಿದ್ದಾರೆ.
ಅಮರಾವತಿಯ ಇರ್ವಿನ್ ಜನರಲ್ ಆಸ್ಪತ್ರೆಯಲ್ಲಿ ನಡೆಸಿದ ಮರಣೋತ್ತರ ಪರೀಕ್ಷೆಯಲ್ಲಿ ದೀಪಾಲಿ ಅವರು ಐದು ತಿಂಗಳ ಗರ್ಭಿಣಿ ಎಂದು ತಿಳಿದುಬಂದಿದೆ. ಶಿವಕುಮಾರ್ ಕಿರುಕುಳದಿಂದಾಗಿ ತಾನು ಮೊದಲು ಗರ್ಭಪಾತಕ್ಕೆ ಒಳಗಾಗಿದ್ದೆ ಎಂದು ಆತ್ಮಹತ್ಯೆ ಪತ್ರದಲ್ಲಿ ಆರೋಪಿಸಿದ್ದಾರೆ. ಇದಲ್ಲದೆ ಅವರು ನೀಡಿದ ಲೈಂಗಿಕ ಮಾನಸಿಕ ಕಿರುಕುಳವನ್ನು ವಿವರವಾಗಿ ಆತ್ಮಹತ್ಯೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ದೀಪಾಲಿ ಅವರು 2013ರಲ್ಲಿ ಮಹಾರಾಷ್ಟ್ರ ಸರ್ಕಾರ ಸೇವೆಗೆ ಆಯ್ಕೆಯಾಗಿದ್ದರು . ಇದೀಗ ಎಂ.ಎಸ್. ರೆಡ್ಡಿ ಅವರನ್ನು ಅಮರಾವತಿ ಜಿಲ್ಲೆಯಲ್ಲಿ ಬರುವ ಮೆಲ್ಘಾಟ್ ಟೈಗರ್ ರಿಸರ್ವ್ (ಎಂಟಿಆರ್) ನ ಕ್ಷೇತ್ರ ನಿರ್ದೇಶಕ ಮತ್ತು ಎಪಿಸಿಸಿಎಫ್ ಆಗಿ ತಕ್ಷಣದಿಂದ ಜಾರಿಗೆ ತರಲಾಗಿದೆ.