ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಭಾಗ ಮತ್ತು ಮಡಿಕೇರಿಯ ಕೆಲ ಕಡೆಗಳಲ್ಲಿ ಮತ್ತೆ ಭೂಮಿ ಕಂಪಿಸಿದ ಅನುಭವವಾಗಿದೆ. ಮೂರು ದಿನಗಳ ಹಿಂದಷ್ಟೇ ಈ ಭಾಗಗಳಲ್ಲಿ ಲಘು ಭೂಕಂಪನವಾಗಿದ್ದು, ಇದೀಗ ಮತ್ತೆ ಭೂಮಿ ಅದುರಿದೆ.
ಸುಳ್ಯ ತಾಲೂಕಿನ ಹಲವು ಕಡೆ ಸದ್ದುನೊಂದಿಗೆ ಭೂಮಿ ಕಂಪಿಸಿದ ಅನುಭವಾಗಿದೆ. ಸುಳ್ಯ, ಪಂಜ, ಗುತ್ತಿಗಾರು, ಐವರ್ನಾಡು, ಉಬರಡ್ಕ ಮಿತ್ತೂರು, ಕಲ್ಲಾಜೆ, ಎಲಿಮಲೆ, ಮರ್ಕಂಜ, ಅರಂತೋಡು, ಸಂಪಾಜೆ ಮೊದಲಾದ ಕಡೆಗಳಲ್ಲಿ ಕಂಪಿಸಿದ ಅನುಭವವಾಗಿದೆ.
ಮಂಗಳವಾರ ಬೆಳಿಗ್ಗೆ 7.44 ರಿಂದ 7.45 ರ ಹೊತ್ತಿಗೆ ಲಘುವಾಗಿ ಭೂಮಿ ಕಂಪಿಸಿದೆ. ಭಾರೀ ವಿಚಿತ್ರ ಶಬ್ದದೊಂದಿಗೆ ಕೆಲವು ಸೆಕೆಂಡ್‌ಗಳ ಕಾಲ ಭೂಮಿ ಕಂಪಿಸಿದೆ ಎನ್ನಲಾಗಿದೆ. ಜನರು ಆತಂಕದಲ್ಲಿ ಮನೆಯಿಂದ ಹೊರ ಬಂದಿದ್ದಾರೆ. ಪಾತ್ರೆಗಳು, ಪೀಠೋಪಕರಣಗಳು ಅಲುಗಾಡಿವೆ. ಇದೇ ವೇಳೆ ಮರಗಳು ಉರುಳಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಸುಳ್ಯ, ಸಂಪಾಜೆ, ಗೂನಡ್ಕ, ಗುತ್ತಿಗಾರು ಮತ್ತಿತರ ವಿವಿಧ ಭಾಗಗಳಲ್ಲಿ ಭೂಮಿ ಕಂಪಿಸಿರುವ ಬಗ್ಗೆ ಜನರು ತಿಳಿಸಿದ್ದಾರೆ.
ಕೊಡಗು ಜಿಲ್ಲೆಯ ನಾಪೋಕ್ಲು ಕುಕ್ಕುಂದ, ಕಾಡು, ಬಲ್ಲಮಾವಟ್ಟಿ, ದಬ್ಬಡ್ಕ, ಪೆರಾಜೆ, ಕರಿಕೆ, ಭೂತನಕಾಡು, ಭಾಗಮಂಡಲ ಸೇರಿದಂತೆ ವಿವಿಧ ಕಡೆ ಭೂಮಿ ಕಂಪಿಸಿದ ಅನುಭವವಾಗಿದೆ.

























