ಬೆಂಗಳೂರು: ರಸ್ತೆ ಡಿವೈಡರ್‌ಗೆ ಕಾರು ಡಿಕ್ಕಿ ಹೊಡೆದು ಕರ್ನಾಟಕದ ಇಬ್ಬರು ಪೊಲೀಸರು, ಓರ್ವ ಖಾಸಗಿ ವ್ಯಕ್ತಿ ಸಾವನ್ನಪ್ಪಿದ ಘಟನೆ ಆಂಧ್ರ ಪ್ರದೇಶದ ಚಿತ್ತೂರು ಪೂತಲಪಟ್ಟು ಮಂಡಲ ಪಿ.ಕೊಟ್ಟಕೋಟ ರೈಲ್ವೆ ಕೆಳ ಸೇತುವೆ ಬಳಿ ನಡೆದಿದೆ.
ಘಟನೆಯಲ್ಲಿ ಶಿವಾಜಿನಗರ ಪಿಎಸ್ ಐ ಅವಿನಾಶ್, ಪಿಸಿ ಅನಿಲ್ ಹಾಗೂ ಕಾರು ಚಾಲಕ ಸಾವನ್ನಪ್ಪಿದ್ದಾರೆ. ಕಾನ್ಸ್‌ಟೇಬಲ್ ಶರಣಬಸವ, ಪಿಎಸ್ ಐ ದೀಕ್ಷಿತ್ ಅವರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಳುಗಳನ್ನು ವೇಲೂರು ಸಿಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಾಂಜಾ ಕೇಸ್‌ಗೆ ಸಂಬಂಧಿಸಿದಂತೆ ಆರೋಪಿಗಳ ಬಂಧನಕ್ಕಾಗಿ ಶಿವಾಜಿನಗರದ ಓರ್ವ ಎಸ್‌ಐ, ಪಿಎಸ್ಐ, ಮೂವರು ಪೇದೆಗಳು ಸೇರಿ 6 ಪೊಲೀಸರ ತಂಡ ಆಂಧ್ರ ಪ್ರದೇಶದ ಚಿತ್ತೂರಿಗೆ ಖಾಸಗಿ ಟ್ಯಾವೆಲ್ಸ್‌ನಿಂದ ಕಾರನ್ನು ಬಾಡಿಗೆ ಪಡೆದು ತೆರಳಿತ್ತು. ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಚಿತ್ತೂರು ಬಳಿ ಅಪಘಾತ ಸಂಭವಿಸಿದ್ದು, ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
ಘಟನೆ ಸಂಬಂಧ ಸ್ಥಳೀಯ ಪೊಲೀಸರಿಂದ ಬೆಂಗಳೂರು ಪೊಲೀಸರು ಮಾಹಿತಿ ಪಡೆದುಕೊಂಡಿದ್ದು, ಅಪಘಾತ ಸ್ಥಳಕ್ಕೆ ಪುಲಿಕೇಶಿನಗರ ಎಸಿಪಿ ಅಬ್ದುಲ್, ಶಿವಾಜಿನಗರ ಪೊಲೀಸರು ತೆರಳಿದ್ದಾರೆ. ನಿದ್ದೆ ಮಂಪರಿನಲ್ಲಿ ಡಿವೈಡರ್‌ಗೆ ಕಾರು ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಇನ್ನು, ಇಂದು ಮುಂಜಾನೆ ಚಿತ್ತೂರು ಸಮೀಪ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಗಳು ಮರಣ ಹೊಂದಿ, ಇತರ ಐದು ಸಿಬ್ಬಂದಿಗಳು ಗಾಯಗೊಂಡ ಘಟನೆ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ದಿಗ್ಧಮೆ ವ್ಯಕ್ತಪಡಿಸಿದ್ದಾರೆ.
ಅಪಘಾತದ ಸುದ್ದಿ ತಿಳಿದ ತಕ್ಷಣ ಸಚಿವರು, ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ ಸೂಕ್ತ ಕ್ರಕೈಗೊಳ್ಳುವಂತೆ ಸೂಚಿಸಿದ್ದಾರೆ. ಇವರೆಲ್ಲರೂ ಬೆಂಗಳೂರಿನ ಶಿವಾಜಿ ನಗರದ ಪೊಲೀಸ್ ಠಾಣೆಯ ಸಿಬ್ಬಂದಿಗಳಾಗಿದ್ದು ತನಿಖೆಯ ಸಂಬಂಧ ತೆರಳುತ್ತಿದ್ದರು.
ಗಾಯಗೊಂಡ ಸಿಬ್ಬಂದಿಗಳ ನೆರವಿಗೆ ಧಾವಿಸಿ, ಅತ್ಯುತ್ತಮ ಚಿಕಿತ್ಸೆ ದೊರಕಿಸಲು ಎಲ್ಲಾ ಅಗತ್ಯ ಕ್ರಮ ಜರುಗಿಸಬೇಕು ಎಂದೂ ಸೂಚಿಸಿದ್ದಾರೆ. ಸಾರ್ವಜನಿಕರ ಪ್ರಾಣ ಹಾಗೂ ಆಸ್ತಿಪಾಸ್ತಿಗಳ ರಕ್ಷಿಸುವ ಕಾರ್ಯದಲ್ಲಿ ಪೊಲೀಸ್ ಸಿಬ್ಬಂದಿ ಮೃತ ಪಟ್ಟಿರುವುದು ಅತ್ಯಂತ ನೋವು ತಂದಿದೆ ಎಂದೂ ಸಚಿವರು ಹೇಳಿದ್ದಾರೆ.
ಕೊಪ್ಪಳ ಜಿಲ್ಲೆಯ ಕುಕನೂರಿನ ಬಳಿ ಸಂಭವಿಸಿದ ಇನ್ನೊಂದು ಭೀಕರ ಅಪಘಾತದಲ್ಲಿ ಐದು ಮಂದಿ ಮೃತಪಟ್ಟ ಘಟನೆಯ ಬಗ್ಗೆಯೂ ಸಚಿವರು ಪ್ರತಿಕ್ರಿಯಿಸಿ ಸಂತಾಪ ಸೂಚಿಸಿದ್ದಾರೆ. ಸ್ಥಳೀಯ ಪೊಲೀಸರು ಘಟನೆಯ ಸಂಬಂಧ ತನಿಖೆಯನ್ನು ನಡೆಸುತ್ತಿದ್ದಾರೆ ಎಂದು ಹೇಳಿದರು.