ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಬಳಿಯ ಪರ್ವತ ಮುಖಿಯಲ್ಲಿ ಸಂಭವಿಸಿದ ಗುಡ್ಡಕುಸಿತ ದುರಂತಕ್ಕೆ ಸಿಲುಕಿದ ಕುಟುಂಬಕ್ಕೆ ರಾಜ್ಯ ಸರ್ಕಾರ 11 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದೆ.
ಗುಡ್ಡ ಕುಸಿದ ಪರಿಣಾಮ ಮಣ್ಣಿನಡಿ ಸಿಲುಕಿ ಕುಸುಮಾಧರ ಮತ್ತು ರೂಪಶ್ರೀ ದಂಪತಿ ಮಕ್ಕಳಾದ 11 ವರ್ಷದ ಶ್ರುತಿ ಹಾಗೂ 6 ವರ್ಷದ ಜ್ಞಾನಶ್ರೀ ಮೃತಪಟ್ಟಿದ್ದರು.

ಮನೆ ಮೇಲೆ ಗುಡ್ಡ ಕುಸಿದು ಬೀಳ್ತಿದ್ದಂತೆ ಮನೆಯಲ್ಲಿದ್ದವರು ಆಚೆ ಓಡಿ ಬಂದಿದ್ದರು. ಆದರೆ ಮನೆಯೊಳಗೆ ಸಿಲುಕಿದ್ದ ಶ್ರುತಿ ಹಾಗೂ ಜ್ಞಾನಶ್ರೀ ಮಣ್ಣಿನಡಿಯಲ್ಲಿ ಸಿಲುಕಿದ್ದರು. ತಕ್ಷಣ ಜೆಸಿಬಿ ಮೂಲಕ
ಮಕ್ಕಳ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಅಗ್ನಿಶಾಮಕ ದಳ ಸಿಬ್ಬಂದಿಯ ಗಂಟೆಗಳ ಕಾರ್ಯಾಚರಣೆ ಬಳಿಕ ಮಕ್ಕಳು ಸಿಕ್ಕಿದ್ದು ಮಾತ್ರ ಶವವಾಗಿ.
ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್, ಇಂದು ಸಂತ್ರಸ್ತ ಕುಟುಂಬವನ್ನ ಭೇಟಿ ಮಾಡಿ ಸಾಂತ್ವನ ಹೇಳಿದರು. ನಂತರ ಸರ್ಕಾರದ ವತಿಯಿಂದ 11 ಲಕ್ಷ ರೂಪಾಯಿ ಪರಿಹಾರವನ್ನ ನೀಡಿದರು.


























