ಛತ್ತೀಸ್‌ಗಢದ ಬಿಲಾಸ್‌ಪುರದಲ್ಲಿ ಯುವಕನೊಬ್ಬ ತನ್ನ ಗೆಳತಿಯನ್ನು ಇಂಪ್ರೆಸ್ ಮಾಡಲು ಕಾರು ಓಡಿಸು ಎಂದು ಕೊಟ್ಟಿದ್ದ. ಡ್ರೈವಿಂಗ್ ಬಾರದ ಕಾರಣ ಗೆಳತಿ, ಇಬ್ಬರು ಬೈಕ್ ಸವಾರರಿಗೆ ಕಾರನ್ನ ತೆಗೆದುಕೊಂಡು ಹೋಗಿ ಗುದ್ದಿದ್ದಾಳೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸದ್ಯ ಆರೋಪಿ ಯುವಕ ಹಾಗೂ ಆತನ ಗೆಳತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಈ ಘಟನೆಯು ಬಿಲಾಸ್‌ಪುರದ ಕೋಟಾ ರಸ್ತೆಯಲ್ಲಿ ನಡೆದಿದೆ. ಮುಂಗೇಲಿ ಬಡಾವಣೆಯ ನಿವಾಸಿ ರವೀಂದ್ರ ಕುರ್ರೆ ಗೆಳತಿಯೊಂದಿಗೆ ಕಾರಿನಲ್ಲಿ ಹೋಗುತ್ತಿದ್ದ. ಈ ವೇಳೆ ರವೀಂದ್ರ ತನ್ನ ಗೆಳತಿಗೆ ಕಾರು ಚಲಾಯಿಸಲು ಕೊಟ್ಟಿದ್ದ. ಕಾರನ್ನ ಸ್ವಲ್ಪ ದೂರ ಓಡಿಸಿದ ನಂತರ ಎಕ್ಸಲೇಟರ್ ಜೋರಾಗಿ ಒತ್ತಿದ್ದಾಳೆ ಎನ್ನಲಾಗಿದೆ.

ಇದರಿಂದ ಎದುರಿನಿಂದ ಬಂದ ಬೈಕ್‌ಗೆ ಕಾರು ಡಿಕ್ಕಿ ಹೊಡೆದಿದೆ. ಈ ಬೈಕ್‌ನಲ್ಲಿ ಮೂವರಿದ್ದರು. 50 ವರ್ಷದ ಶುಕುವಾರ ಬಾಯಿ ಕೇವತ್, ಜೇತಾರಾಮ್ ಯಾದವ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಬೈಕ್ ಚಾಲಕ ತುಳಸಿರಾಮ್ ಯಾದವ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ವರದಿಗಳ ಪ್ರಕಾರ ಇವರ ಕಾಲು ಮುರಿದಿದೆ. ತಲೆ, ಭುಜ, ಬೆನ್ನು ಮತ್ತು ಮೊಣಕಾಲುಗಳಿಗೆ ಗಂಭೀರ ಗಾಯಗಳಾಗಿವೆ. ಅಪಘಾತದ ನಂತರ ಸ್ಥಳೀಯರು ಹುಡುಗಿ ಮತ್ತು ಆಕೆಯ ಗೆಳೆಯ ರವೀಂದ್ರ ಕುರ್ರೆಯನ್ನು ಹಿಡಿದಿದ್ದಾರೆ. ನಂತರ ಘಟನೆಯ ಬಗ್ಗೆ ಜನರೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.


























