ಭಾರತಕ್ಕಿಂದು ಸ್ವತಂತ್ರವಾದ 75ರ ಸಂಭ್ರಮ. ಗೌರವಾನ್ವಿತ ಪ್ರಧಾನಿಯವರ ಕಲ್ಪನೆಯಂತೆ ಈ ವರ್ಷದ ಸ್ವಾತಂತ್ರ್ಯದ ಆಚರಣೆ ಪ್ರತಿ ವರ್ಷಕ್ಕಿಂತ ಸ್ವಲ್ಪ ಭಿನ್ನ. ಮನೆಗಳ ಮೇಲೆ ಮೂರು ದಿನಗಳ ಕಾಲ ರಾರಾಜಿಸುವ ಭಾವುಟ, ಮನೆಯ ಮನಗಳಲ್ಲೂ ಸ್ವಾತಂತ್ರ್ಯ ಪಡೆದ ಸಂತೋಷದ ಹಂಚಿಕೆ ಮಾಡಿದ್ದಂತೂ ಸತ್ಯ. ನಿರ್ಧಾರ ಸರಿಯಾಗಿಯೇ ಇದೆ, ಕೆಲವು ವರ್ಷಗಳಿಂದ ನಿಯಂತ್ರಿತ ನಿಯಮಗಳ ಜೊತೆ ತಿರಂಗಗಳು ಹಾರಬೇಕಿತ್ತು ಮತ್ತು ಎಲ್ಲೆಂದರಲ್ಲಿ ಎಲ್ಲೆ ಮೀರಿ ಹಾರುವಂತಿರಲಿಲ್ಲ. ಒಳ್ಳೆಯ ಮತ್ತು ಉತ್ಪ್ರೇಕ್ಷನೀಯ ಕಲ್ಪನೆ ಅವಿಶ್ರಾಂತ ಪ್ರಧಾನಿಯವರದ್ದು. ಅವರ ನಿಷ್ಕಲ್ಮಶ ಯೋಚನೆಯನ್ನು ಸ್ವಚ್ಛವಾಗಿಯೇ ಪಾಲಿಸೋಣ.
ಭಾವುಟ ಹಂಚಿಕೆಯಾದಂತೆ ಸಂಬಂದ, ಭಾವನೆಗಳು ಯಾಕೆ ಹಂಚಿಕೆಯಾಗಿಲ್ಲ ಎನ್ನುವುದು ವಿಪರ್ಯಾಸ ಮತ್ತು ಮತ್ತೊಂದು ಬ್ರಿಟಿಷರು ಮುಂದೊಂದು ದಿನ ನಮ್ಮನ್ನು ಪರಾತಂತ್ರ್ಯಕ್ಕೆ ಒಳಗಾಗಿಸುತ್ತಾರೇನೋ ಎಂಬ ಆತಂಕ ಮನೆ ಮಾಡಿದೆ.
ರಾಷ್ಟ್ರ ಕವಿ ಕುವೆಂಪು ರವರು ಹೇಳಿದ
” ಮತದ ಬಿರುಕುಗಳನು ತೊರೆವೆ
ನುಡಿಗಳೊಡಕುಗಳನು ಮರೆವೆ
ತೊತ್ತ ತೊಡಕುಗಳನು ಬಿರಿವೆ
ಜೀವನವನೆ ದೇವಿಗೆರೆವೆ
ಬಿಡುತೆ ಗುಡಿಯ ಕಟ್ಟಲು ” ಎಂಬ ಭಾರತ ಮಾತೆಯ ಬಗೆಗಿನ ಸಾಲುಗಳು ಕೇವಲ ಕನ್ನಡ ಓದುಗರಿಗೆ ಮತ್ತು ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸಲು ಮೀಸಲಾಯಿತೇ? ಯಾಕೆಂದರೆ ನಾವು ಇದಾವುದನ್ನು ತೊರೆದಿಲ್ಲ, ಮರೆತಿಲ್ಲ, ಬಿಟ್ಟಿಲ್ಲ. ನಾವು ಓದುತ್ತಿರುವ 25 ವರ್ಷಗಳ ಹಿಂದಿನ ಕಾಲಕ್ಕೆ ಈಗಿರುವ ಜಾತಿ, ಮತ, ಧರ್ಮಗಳ ಬಿರುಕುಗಳು ಇರಲಿಲ್ಲವೇ ಇಲ್ಲ. ಆಗಲೂ ಪಠ್ಯಕ್ರಮದಲ್ಲಿ, ಸಮಾಜದಲ್ಲಿ ಈಗಿರುವ ಎಲ್ಲವೂ ಇತ್ತು ಎಲ್ಲರೂ ಇದ್ದರು. ಆದರೆ ಆಗ ಯಾವ ಕ್ಲೇಶವೂ ಬರಲಿಲ್ಲವೆಂಬುದು ಈಗ ಚರ್ಚಿಸುವವರಿಗೆ ಅನುಭವ ವೇದ್ಯವಾಗಿಲ್ಲವೇ? ಒಂದು ವೇಳೆ ಹೌದಾದರೆ ನಾವು ಪ್ರಸ್ತುತ ಅಪರಿಮಿತ ಬುದ್ದಿವಂತರಾಗಿದ್ದೇವೆಯೇ? ಯೋಚಿಸಬೇಕಾಗಿದೆ.
ಕೆಸರಿನ ಕೊಳದಲ್ಲಿ ಮಕರ ಮತ್ತು ಗಜ ಹೋರಾಡಿದರೆ ಸಾಮಿಪ್ಯತೆಯಲ್ಲಿರುವ ಅನೇಕ ಜಲಚರಗಳು, ಹೂ ರಾಶಿಗಳು ದ್ವಂಸವಾಗುವಂತೆ ರಾಜಕೀಯ ಮತ್ತು ಧರ್ಮದ ನೆಪದಲ್ಲಿ ಜನ ಸಾಮಾನ್ಯರನ್ನು ಯಾಕೆ ಬಲಿ ತೆಗೆದುಕೊಳ್ಳುತ್ತೀರಿ? ನಾಯಕರೇ ನಾವು ಸಾಮಾಜಿಕ ಮಣ್ಣನೆಯಂತೆ ಒಟ್ಟಾಗಿ ಬದುಕುವುದು ನಿಮಗಿಷ್ಟವಿಲ್ಲವೇ? ಭಾರತ ಮಾತೆಯ ನೆಲದಲ್ಲಿದ್ದು, ಶುದ್ಧ ಗಾಳಿ ನೀರು ಸೇವಿಸಿ ಜಿಗಣೆಯಂತೆ ಅದೇ ಶರೀರಕ್ಕೆ ನೋವು ಕೊಡುವ ದೇಶದ್ರೋಹಿಗಳಿಗೆ ಆಶ್ರಯದಾತರಾಗಿಬಿಟ್ಟಿರೇ?
ನಮಗೆಲ್ಲಾ ಗೊತ್ತು ಪ್ರಸ್ತುತ ಪ್ರಚಲಿತದಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರಂತೆ ದೇಶಕ್ಕಾಗಿ ಸೆರೆಮನೆಯಲ್ಲಿದ್ದು ಶಿಕ್ಷೆಯನ್ನು ಅನುಭವಿಸಿ ಹೊರಬರಲಾರದೆ ನೇಣಿಗೊ, ಸಮಾಧಿಯಂತ ಹ ಬ್ರಿಟಿಷರ ಕ್ರೂರ ಹಿಂಸೆಗೆ ಬಲಿಯಾದ ಎಳೆಯ, ಹಿರಿಯ ಜೀವಗಳನ್ನು ನಾವು ನೆನಪಿಸುತ್ತಿಲ್ಲವೆಂದು. ಆದರೆ ಅವರ ಬಲಿದಾನವು ನಮ್ಮ ದಾಸಮುಕ್ತಿಗಾಗಿ ಎನ್ನುವುದನ್ನು ಇದೊಂದು ದಿನವಾದರೂ ನೆನಪಿಸಿಕೊಳ್ಳಿ. ಆ ಕಾಲಕ್ಕೂ ‘ಅಂಬಿ’ಯಂತಹ ಹಿತ ಶತ್ರುಗಳಿದ್ದದ್ದರಿಂದ ನಾವು ಸುಲಭವಾಗಿ ಬ್ರಿಟಿಷರ ಮುಷ್ಟಿಯೊಳಗೆ ಬೀಳಬೇಕಾಯಿತು. ಮತ್ತೊಮ್ಮೆ ಅಂತಹ ದೇಶ ದ್ರೋಹದ ಕೃತ್ಯವೆಸಗಿ ನಮ್ಮನ್ನು ನಾವೇ ಪರಾಧೀನರಾಗಿಸಿಕೊಳ್ಳುತ್ತಿರುವುದನ್ನು ನಾವೇ ಆತ್ಮ ವಿಮರ್ಶೆ ಮಾಡಿಕೊಂಡು ನಿಲ್ಲಿಸಬೇಕಾಗಿದೆ.
ಎಲ್ಲರನ್ನು ಸಾಕಿ ಪೊರೆವ ಕ್ಷಮಾಮಯಿ, ಸಹನಾಮಯಿ ಭಾರತ ಮಾತೆಯನ್ನು ಅಡಿಯಿಂದ ಮುಡಿ ಯವರೆಗೂ, ಎಡ ಬಲ ಗಳಲ್ಲೂ ರಕ್ಷಿಸುವ ಭಾರ ಎಲ್ಲ ಪ್ರಜೆಗಳಿಗಿದೆ ಮತ್ತು ಹರಿವ ನೆತ್ತರು, ಸೇವಿಸೋ ಗಾಳಿ, ಎಲ್ಲವೂ ಎಲ್ಲರದು ಒಂದೇ ಆಗಿರುವಾಗ ತಾರತಮ್ಯವೇಕೆ? ಒಮ್ಮತದಿಂದ ಮನುಷ್ಯರಾಗಿ ಬದುಕೋಣ. ಭವ್ಯ ನೆಲ ಸಂಸ್ಕೃತಿ ಹೀಗೆ ಅಮರ ವಾಗಿರಲಿ.
ಹಾಡಬಲ್ಲವನೋದು ಕೂಡಿ ತಪ್ಪದ ನಂಟು |ಬೇಡಿದ್ದನೀವ – ದೊರೆಸೇವೆ ಇವು ಮುನ್ನ ಮಾಡಿದ ಸುಕೃತವು ಸರ್ವಜ್ಞ ಎನ್ನುವಂತೆ ಹಾಡಬಲ್ಲವನ ಓದು, ಕೊನೆತನಕ ಉಳಿದ ಸ್ನೇಹ ಸಂಬಂಧ, ಉದಾರಿಯದ ದೊರೆಸೇವೆ ಇವು ಮುನ್ನ ಮಾಡಿದ ಸುಕೃತವಾದರೆ,ನಾವು ಈ ಪುಣ್ಯ ಭೂಮಿಯಲ್ಲಿ ಹುಟ್ಟಿರುವುದು ಸುಕೃತದ ಫಲ ಇದಕ್ಕಾದರೂ ಪವಿತ್ರವಾಗಿ ಬದುಕೋಣ.
ಸ್ವಾತಂತ್ರೋತ್ಸವದ ಶುಭಾಶಯಗಳು…
✍️. ರಾಧಾಕೃಷ್ಣ ಎ
ಆಡಳಿತಾಧಿಕಾರಿ
ವಿಠ್ಠಲ್ ಜೇಸಿ ಆಂಗ್ಲ ಮಾಧ್ಯಮ ಶಾಲೆ ವಿಟ್ಲ