ಮಂಗಳೂರು: ಯಕ್ಷಗಾನ ಕಲಾವಿದರೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಟೀಲು ಸಮೀಪ ಉಲ್ಲಂಜೆ ಎಂಬಲ್ಲಿ ನಡೆದಿದೆ.
ಮೃತರನ್ನು ಕೊಡೆತ್ತೂರು ನಿವಾಸಿ ಶಂಭು ಕುಮಾರ್ (48) ಎಂದು ಗುರುತಿಸಲಾಗಿದೆ.

ಶಂಭು ಕುಮಾರ್ ರವರು ಕಳೆದ ಹಲವು ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು, ಪುತ್ತೂರು ಮೇಳ, ಬಪ್ಪನಾಡು ಮೇಳ ಮತ್ತು ಪ್ರಸ್ತುತ ಕಟೀಲು ಮೇಳದಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದರು.
ಹೊಯಿಗೆಗುಡ್ಡೆ ಉಮಾಮಹೇಶ್ವರ ದೇವಸ್ಥಾನದ ಹೆಸರಿನೊಂದಿಗೆ ಕಳೆದ ಕೆಲ ವರ್ಷಗಳಿಂದ ಚಿಕ್ಕ ಮೇಳವನ್ನು ನಡೆಸುತ್ತಿದ್ದು, ಈ ಬಾರಿ ಅದೇ ಹೆಸರಿನಲ್ಲಿ ಎರಡು ಚಿಕ್ಕ ಮೇಳವನ್ನು ನಡೆಸುತ್ತಿದ್ದರು. ಆರ್ಥಿಕ ಮುಗ್ಗಟ್ಟು ಆತ್ಮಹತ್ಯೆಗೆ ಕಾರಣವಾಗಿರಬೇಕು ಎನ್ನಲಾಗಿದೆ. ಮೃತರು ಪತ್ನಿ ಎರಡು ಮಕ್ಕಳನ್ನು ಅಗಲಿದ್ದಾರೆ.