ಪುತ್ತೂರು: ಹಿಂದೂ ಸನಾತನ ಸಂಸ್ಕೃತಿಯ ಪ್ರತಿರೂಪವಾಗಿ ವಿವೇಕಾನಂದ ಶಿಶು ಮಂದಿರದ ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿಯ ವತಿಯಿಂದ ನಡೆಯುವ 24ನೇ ವರ್ಷದ ‘ಶ್ರೀಕೃಷ್ಣ ಲೋಕ’ ಕಾರ್ಯಕ್ರಮವು ಆ.19 ರಂದು ನಡೆಯಲಿದೆ.
ವಿವೇಕಾನಂದ ವಿದ್ಯಾವರ್ಧಕ ಸಂಘದ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ವಿವೇಕಾನಂದ ಶಿಶು ಮಂದಿರದಲ್ಲಿ ಕಳೆದ 23 ವರ್ಷಗಳಿಂದ ಶ್ರೀಕೃಷ್ಣಲೋಕ ಕಾರ್ಯಕ್ರಮದ ಮೂಲಕ ಸಾವಿರಾರು ಮಂದಿ ರಾಧೆ, ಕೃಷ್ಣ, ಯಶೋಧೆ ವೇಷಧಾರಿ ಮಕ್ಕಳೊಂದಿಗೆ ವಿಶೇಷ ಶೋಭಾಯಾತ್ರೆಯ ಮೂಲಕ ಅದ್ದೂರಿಯಾಗಿ ನಡೆಯುತ್ತಾ ಬಂದಿದ್ದು, ಈ ವರ್ಷವೂ ಅದ್ದೂರಿಯಾಗಿ ಶ್ರೀಕೃಷ್ಣ ಲೋಕ ಕಾರ್ಯಕ್ರಮ ಸಂಭ್ರಮಿಸಲಿದೆ.
ಆ.19 ರಂದು ಬೆಳಿಗ್ಗೆ 8.15ಕ್ಕೆ ಕೃಷ್ಣ, ರಾಧೆ, ಯಶೋಧೆಯರ ನೋಂದಾವಣೆಯು ಪ್ರಾರಂಭಗೊಳ್ಳಲಿದೆ. ನಂತರ ಮಕ್ಕಳಿಂದ ಪ್ರಾರ್ಥನೆ, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಹಾಗೂ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಂದ ಭಜನೆ ನಡೆಯಲಿದೆ. ನಂತರ ತೊಟ್ಟಿಲ ಸಂಭ್ರಮದ ಮಗುವಿನ ಅಮ್ಮನಿಗೆ ಆರತಿ ಬೆಳಗಿ ಬಾಗಿನ ನೀಡಲಾಗುವುದು. ನಂತರ ಆರು ತಿಂಗಳ ಮಗುವನ್ನು ತೊಟ್ಟಿಲಲ್ಲಿ ತೂಗಿ, ಬೆಣ್ಣೆ ತಿನ್ನಿಸಿ, ಮಾತೆಯರಿಂದ ಜೋಗುಳವನ್ನು ವಿಶೇಷವಾಗಿ ಹಾಡಲಾಗುವುದು. ನಂತರ ರಾಧೆ-ಕೃಷ್ಣ-ಯಶೋಧೆಯರ ಭವ್ಯ ಶೋಭಾಯಾತ್ರೆಯು ಪ್ರಾರಂಭಗೊಳ್ಳಲಿದೆ. ನಂತರ ಮಹಾಲಿಂಗೇಶ್ವರ ದೇವಸ್ಥಾನದ ಒಳಗೆ ತೆರಳಿ ದೇವರಿಗೆ ಪ್ರದಕ್ಷಿಣೆಯು ಈ ಬಾರಿ ವಿಶೇಷವಾಗಿ ನಡೆಯಲಿದೆ. ನಂತರ ದೇವಸ್ಥಾನದ ನಟರಾಜ ವೇದಿಕೆಯ ಬಳಿ ಶೋಭಾಯಾತ್ರೆಯು ಸಂಪನ್ನಗೊಳ್ಳಲಿದೆ.
ಶೋಭಾಯಾತ್ರೆ ಸಂಪನ್ನಗೊಂಡ ಬಳಿಕ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಉದ್ಯಮಿ ಬಿ.ವಸಂತ ಪೈ ಬದಿಯಡ್ಕ, ಕುದುರೆಮುಖ ಕಂಪನಿಯ ನಿವೃತ್ತ ಜನರಲ್ ಮೆನೇಜರ್ ಗಜಾನನ ಪೈ ದಿಕ್ಕೂಚಿ ಭಾಷಣ ಮಾಡಲಿದ್ದಾರೆ. ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ರವರು ಗೌರವ ಉಪಸ್ಥಿತಿಯಿರಲಿದ್ದಾರೆ.
ಈ ಬಾರಿಯ ಶ್ರೀಕೃಷ್ಣ ಲೋಕದಲ್ಲಿ ಸುಮಾರು 1300 ಮಂದಿ ರಾಧೆ-ಕೃಷ್ಣ-ಯಶೋಧೆ ವೇಷಧಾರಿ ಮಕ್ಕಳು ಭಾಗವಹಿಸುವ ನಿರೀಕ್ಷೆಯಿದೆ. ಈಗಾಗಲೇ ಸುಮಾರು 800 ಮಂದಿ ನೋಂದಾಯಿಸಿಕೊಂಡಿದ್ದಾರೆ. ಇದು ಸ್ಪರ್ಧೆಯಲ್ಲ. ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಪ್ರೋತ್ಸಾಹಕ ಬಹುಮಾನ ನೀಡಲಾಗುವುದು. 12 ವರ್ಷದ ಒಳಗಿನ ಮಕ್ಕಳು ಮುಕ್ತವಾಗಿ ಭಾಗವಹಿಸಬಹುದು. ಭಾಗವಹಿಸುವವರು ಶಿಶು ಮಂದಿರದಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.