ಮಂಗಳೂರು: ನಗರದ ಹೊರವಲಯದ ವಳಚ್ಚಿಲ್‌ನಲ್ಲಿ ಯುವಕನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ಘಟನೆ ಶುಕ್ರವಾರ ತಡರಾತ್ರಿ ಸಂಭವಿಸಿದ್ದು, ಮೊಹಮ್ಮದ್ ಆಸೀಫ್ (30) ಗಾಯಗೊಂಡವರು. ಪ್ರಕರಣಕ್ಕೆ ಸಂಬಂಧಿಸಿದಂತೆ ಆಸಿಕ್‌ನನ್ನು ಬಂಧಿಸಲಾಗಿದೆ.
ಆಸಿಕ್ ಮತ್ತು ಮುಸ್ತಾಕ್ ಈ ಹಿಂದೆಯೂ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಇಬ್ಬರ ಮೇಲೆ ಕಾಪು ಪೊಲೀಸ್ ಠಾಣೆಯಲ್ಲಿ 307 ಕೇಸು ದಾಖಲಾಗಿದೆ.
ವಳಚ್ಚಿಲ್ ವ್ಯಾಪ್ತಿಯಲ್ಲಿ ಯುವಕರ ತಂಡವೊಂದು ಗಾಂಜಾ ವ್ಯವಹಾರದಲ್ಲಿ ತೊಡಗಿದ್ದು, ಆ ಗ್ಯಾಂಗ್‌ನಲ್ಲಿ ಆಸಿಕ್ ಮತ್ತು ಮುಸ್ತಾಕ್ ಕೂಡ ಇದ್ದರೆಂದು ತಿಳಿದು ಬಂದಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊಬೈಲ್ ವಿಚಾರ:
ವಳಚ್ಚಿಲ್ ನಿವಾಸಿ ಮಿಫಾಹ್‌ನ ಮೊಬೈಲ್ ಅನ್ನು ಆಸಿಕ್ ಪಡೆದಿದ್ದ. ಅದನ್ನು ವಾಪಸ್ ಕೇಳಿದಾಗ ಉಡಾಫೆಯಿಂದ ಉತ್ತರಿಸಿದ್ದ. ಅದನ್ನು ಮಿಫಾಹ್ ತನ್ನ ಮಾವ ಆಸೀಫ್ ಅವರ ಬಳಿ ಹೇಳಿದ್ದಾನೆ. ಆಸೀಫ್ ಮೊಬೈಲ್ ಬಗ್ಗೆ ಆಸಿಕ್‌ನಲ್ಲಿ ಕೇಳಿದ್ದು, ಈ ವೇಳೆ ಮಾತಿಗೆ ಮಾತು ಬೆಳೆದು ಆಸಿಕ್ ಮತ್ತು ಮುಸ್ತಾಕ್ ಸೇರಿ ಆಸೀಫ್ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗುತ್ತಿದೆ.


























