ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಶಿರಚ್ಛೇದನ ಮಾಡುವುದಾಗಿ ವ್ಯಕ್ತಿಯೊಬ್ಬ ಫೇಸ್‍ಬುಕ್‍ನಲ್ಲಿ ಬೆದರಿಕೆ ಹಾಕಿದ್ದಾರೆ.
ಉತ್ತರಪ್ರದೇಶದ ನಿವಾಸಿ ಆತ್ಮಪ್ರಕಾಶ್ ಪಂಡಿತ್ ಎಂಬಾತ ತನ್ನ ಫೇಸ್‍ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದನು. ಈ ಹಿನ್ನೆಲೆಯಲ್ಲಿ ಸೈಬರ್ ಠಾಣೆ ಪೊಲೀಸರು ಪ್ರಕರಣ ದಾಖಲಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ಈ ವೇಳೆ ಪ್ರಕಾಶ್‍ನನ್ನು ವಿಚಾರಣೆ ನಡೆಸಿದಾಗ ತನ್ನ ಫೇಸ್‍ಬುಕ್ ಖಾತೆ ಹ್ಯಾಕ್ ಆಗಿದೆ. ಇದರಿಂದಾಗಿ ಈ ರೀತಿ ದುರ್ಬಳಕೆ ಆಗುತ್ತಿದೆ ಎಂದು ತಿಳಿಸಿದ್ದಾನೆ.
ಇತ್ತೀಚೆಗಷ್ಟೇ ಉತ್ತರ ಪ್ರದೇಶ ಪೊಲೀಸರು ಆರಂಭಿಸಿರುವ ಸಹಾಯವಾಣಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಕೊಲ್ಲುವುದಾಗಿ ವಾಟ್ಸಪ್ ಸಂದೇಶವೊಂದು ಬಂದಿದ್ದ ಹಿನ್ನೆಲೆಯಲ್ಲಿ ಪೊಲೀಸರು ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಉತ್ತರ ಪ್ರದೇಶದಲ್ಲಿ ಜನರಿಗೆ ಪೊಲೀಸರು ಸಂಪರ್ಕಿಸುವುದು ಸುಲಭವಾಗಲಿ ಎನ್ನುವ ಕಾರಣಕ್ಕಾಗಿ ಸಹಾಯವಾಣಿ ಆರಂಭಿಸಲಾಗಿದೆ. ಇದು ವಾಟ್ಸಪ್ ಸಂಪರ್ಕವನ್ನೂ ಹೊಂದಿದೆ. ಈ ಸಂಖ್ಯೆಗೆ ಶಾಹಿದ್ ಎಂಬ ವ್ಯಕ್ತಿಯಿಂದ ಸಂದೇಶ ಬಂದಿತ್ತು. ಈತ ಬಾಂಬ್ ಸ್ಫೋಟಿಸಿ ಮುಖ್ಯಮಂತ್ರಿಯನ್ನು ಕೊಲ್ಲುವುದಾಗಿ ಎಚ್ಚರಿಸಿದ್ದ.


























