ಬೆಳ್ತಂಗಡಿ: ವಿಷ್ಣುಮೂರ್ತಿ ದೇವಸ್ಥಾನಕ್ಕೆ ಕಳ್ಳರು ನುಗ್ಗಿ ಕಾಣಿಕೆ ಡಬ್ಬಿ ಒಡೆದು ಹಣ ದೋಚಿಕೊಂಡು ಹೋದ ಘಟನೆ ಬೆಳ್ತಂಗಡಿ
ತಾಲೂಕಿನ ತೆಂಕಕಾರಂದೂರುವಿನಲ್ಲಿ ನಡೆದಿದೆ.

ಅಲ್ಲಿನ ಸಿ ಸಿ. ಟಿ ವಿ. ಡಿವಿಆರ್, ಮೊನಿಟರ್ ರನ್ನು ಕಳವುಗೈದಿದ್ದು,
ದೇವಾಲಯದ ಅರ್ಚಕರು ಇಂದು ಬೆಳಿಗ್ಗೆ ದೇವಸ್ಥಾನಕ್ಕೆ ಬಂದಾಗ ಬಾಗಿಲಿಗೆ ಬೀಗ ಒಡೆದು ಅರ್ಧ ಬಾಗಿಲು ತೆರೆದಿದ್ದು, ಸಂಶಯ ಬಂದು ತಕ್ಷಣ ಆಡಳಿತ ಮಂಡಳಿಯ ಸದಸ್ಯರಿಗೆ ಮಾಹಿತಿ ನೀಡಿದ್ದು, ಪರಿಶೀಲನೆ ನಡೆಸಿದಾಗ ಕಳ್ಳರು ನುಗ್ಗಿದ್ದು ಖಚಿತವಾಗಿದೆ. ತಕ್ಷಣ ವೇಣೂರು ಠಾಣೆಗೆ ಮಾಹಿತಿ ನೀಡಿ ಠಾಣಾಧಿಕಾರಿ ಸೌಮ್ಯ ಹಾಗೂ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಸಂಗ್ರಹಿಸಿ ಪ್ರಕರಣ ದಾಖಲಿಸಿದ್ದಾರೆ. ಬೆರಳಚ್ಚು ತಜ್ಞರು, ಶ್ವಾನದಳ ಆಗಮಿಸಿ ಪರಿಶೀಲಿಸಿದ್ದಾರೆ.

ಈ ಹಿಂದೆಯೂ ಇದೇ ದೇವಸ್ಥಾನದಲ್ಲಿ ಕಳ್ಳತನ ನಡೆದು ದೇವರ ಉತ್ಸವ ಬಲಿಮೂರ್ತಿ ಇತರ ಅಮೂಲ್ಯ ವಸ್ತುಗಳನ್ನು ದೋಚಲಾಗಿತ್ತು. ಆದರೆ ಅದರ ಬಗ್ಗೆ ಈವರೆಗೂ ಯಾವುದೇ ಮಾಹಿತಿ ಸಿಕ್ಕಿಲ್ಲ. ಅಲ್ಲದೆ ಇತ್ತೀಚೆಗೆ ಸ್ಥಳೀಯ ಪ್ರದೇಶದ ಕೆಲವು ದೇವಸ್ಥಾನಗಳಲ್ಲಿ ಕಳ್ಳತನವಾಗಿದ್ದು, ಪ್ರಕರಣ ದಾಖಲಾಗಿದೆ.


























