ಮೈಸೂರು: ಎರಡು ದಿನದ ಹಿಂದೆ ಹೊಟೇಲ್ ರೂಮ್ನಲ್ಲಿ ಯುವತಿ ಅನುಮಾನಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ಹೊಸ ಮಾಹಿತಿ ಬೆಳಕಿಗೆ ಬಂದಿದೆ. ಯುವತಿಯೊಂದಿಗೆ ಹೊಟೇಲ್ನಲ್ಲಿದ್ದ ಯುವಕ ವಿವಾಹಿತ ಎಂಬ ಅಂಶ ತಿಳಿದು ಬಂದಿದ್ದು, ಆಕೆಯೊಂದಿಗೆ ಸ್ನೇಹ ಸಲುಗೆಯಿಂದ ಸುತ್ತಾಡುತ್ತಿದ್ದ. ಆದರೆ ಯುವತಿ ಬೇರೊಬ್ಬನೊಂದಿಗೆ ಸ್ನೇಹ ಬೆಳೆಸಿದ್ದೇ ಕೊಲೆಗೆ ಕಾರಣ ಎಂಬೂದಿಗ ತಿಳಿದು ಬಂದ ಮಾಹಿತಿ.
ಪಿರಿಯಾಪಟ್ಟಣ ತಾಲೂಕಿನ ಹರಳಹಳ್ಳಿ ಗ್ರಾಮದ ನಿವಾಸಿ ರವಿ ಅವರ ಪುತ್ರಿ ಅಪೂರ್ವ ಶೆಟ್ಟಿ (21) ಲಾಡ್ಜ್ ಒಂದರಲ್ಲಿ ಮೃತಪಟ್ಟಿದ್ದಾರೆ.
ಈಕೆ ಮೈಸೂರಿನ ಖಾಸಗಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಸಿಎ ವ್ಯಾಸಾಂಗ ಮಾಡುತ್ತಿದ್ದಳು. ಇನ್ನೂ 15 ದಿನಗಳಲ್ಲಿ ಪದವಿ ಮುಗಿಸಿ ಊರಿಗೆ ಹೋಗೋದ್ರಲ್ಲಿದ್ದಳು, ದುರದೃಷ್ಟವಶಾತ್ ಆಕೆ ಸಾವನ್ನಪ್ಪಿದ್ದಾಳೆ.
ವಿವಾಹಿತ ಯುವಕ ಆಶಿಕ್, ಒಂದೂವರೆ ವರ್ಷದ ಹಿಂದೆ ಅಪೂರ್ವ ಶೆಟ್ಟಿ ಪರಿಚಯ ಬೆಳೆಸಿಕೊಂಡಿದ್ದಾನೆ. ಆಕೆಯೊಂದಿಗೆ ಸ್ನೇಹ ಸಲುಗೆ ಅಂತಾ ಸುತ್ತಾಡುತ್ತಿದ್ದನು. ಆದರೆ ಕೆಲವು ದಿನಗಳ ಹಿಂದೆ ಅಪೂರ್ವ ಬೇರೆಯವರ ಜೊತೆ ಸ್ನೇಹ ಬೆಳೆಸಿದ್ದಳು. ಇದರಿಂದ ಅಸಮಾಧಾನಗೊಂಡಿದ್ದ ಆಶಿಕ್, ಆಕೆಯೊಂದಿಗೆ ಜಗಳವಾಡಿದ್ದಾನೆ. ಅಲ್ಲದೆ ಕೊಲೆ ಮಾಡಲು ನಿರ್ಧರಿಸಿದ್ದನು.
ಅದರಂತೆ ಆ.29ರಂದು ಪ್ರತಿಷ್ಠಿತ ಹೊಟೇಲ್ನಲ್ಲಿ ಆಶಿಕ್ ಮತ್ತು ಅಪೂರ್ವ ರೂಮ್ ಮಾಡಿಕೊಂಡಿದ್ದರು. ಈ ವೇಳೆ ಅವರ ನಡುವೆ ಮತ್ತೆ ಜಗಳ ನಡೆದಿದ್ದು, ಈ ವೇಳೆ ಕೋಪದಿಂದ ಆಶಿಕ್ ಯುವತಿಯನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದ. ಈ ಬಗ್ಗೆ ಆರೋಪಿ ಆಶಿಕ್ ಪೊಲೀಸರ ಮುಂದೆ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ. ಸದ್ಯ ಪ್ರಕರಣ ಸಂಬಂಧ ದೇವರಾಜ ಠಾಣಾ ಪೊಲೀಸರು ವಿಚಾರಣೆಯನ್ನು ಮುಂದುವರಿಸಿದ್ದಾರೆ.
ಏನಿದು ಪ್ರಕರಣ..!!?
ಮೈಸೂರು ಹುಣಸೂರು ರಸ್ತೆಯಲ್ಲಿರುವ ಖಾಸಗಿ ಹೋಟೆಲ್ನಲ್ಲಿ ಆ.29 ರಂದು ವಾಸ್ತವ್ಯ ಹೂಡಿದ್ದ ಯುವತಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಳು. ಜೊತೆಯಲ್ಲಿದ್ದ ಯುವಕ ಪರಾರಿಯಾಗಿದ್ದನು. ಯುವತಿ ಸಾವನ್ನಪ್ಪಿರುವ ಬಗ್ಗೆ ಹೋಟೆಲ್ ನ ಆಡಳಿತ ಮಂಡಳಿಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಸ್ಥಳಕ್ಕೆ ಭೇಟಿ ಕೊಟ್ಟ ಪೊಲೀಸರು, ಯುವತಿಯ ಗುರುತು ಪತ್ತೆಹಚ್ಚಿದ್ದರು. ಅಲ್ಲದೆ ಕೊಲೆ ಶಂಕೆ ವ್ಯಕ್ತಪಡಿಸಿದ್ದರು.