ಮಂಗಳೂರು: ವಾರದ ಹಿಂದೆ ಸಿಟಿ ಬಸ್‌ನಿಂದ ಎಸೆಯಲ್ಪಟ್ಟು ಚಿಂತಾಜನಕ ಸ್ಥಿತಿಯಲ್ಲಿದ್ದ ಬಾಲಕನ ಮೆದುಳು ನಿಷ್ಕ್ರಿಯಗೊಂಡಿರುವುದಾಗಿ ವೈದ್ಯರು ಘೋಷಿಸಿರುವ ಹಿನ್ನೆಲೆಯಲ್ಲಿ ಪೋಷಕರು ಬಾಲಕನ ಅಂಗಾಂಗ ದಾನಕ್ಕೆ ನಿರ್ಧರಿಸಿದ್ದಾರೆ. ಈ ಮೂಲಕ ಸಾವಿನಲ್ಲೂ ಬಾಲಕ ಸಾರ್ಥಕತೆ ಮೆರೆದಿದ್ದಾನೆ.
ಮಂಗಳೂರು ಖಾಸಗಿ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ, ವಿಟ್ಲ ಸಮೀಪದ ಉಕ್ಕುಡದ ತ್ಯಾಗರಾಜ್ – ಮಮತಾ ಕರ್ಕೇರ ದಂಪತಿ ಪುತ್ರ ಯಶ್ ರಾಜ್ (16) ಮೆದುಳು ನಿಷ್ಕ್ರಿಯಗೊಂಡ ಬಾಲಕ.
ಯಶ್ ರಾಜ್ ಸೆಪ್ಟಂಬರ್ 7ರಂದು ಬೆಳಗ್ಗೆ ಮಾಸ್ತಿಕಟ್ಟೆಯಿಂದ ಕಾಲೇಜಿಗೆ ಸಿಟಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಆಡಂಕುದ್ರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್‌ನಿಂದ ಹೊರಗೆ ಎಸೆಯಲ್ಪಟ್ಟಿದ್ದರು.
ತಲೆಗೆ ಗಂಭೀರ ಗಾಯಗೊಂಡಿದ್ದ ಆತನನ್ನು ಕೂಡಲೇ ನಗರದ ಇಂಡಿಯಾನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಕಳೆದೊಂದು ವಾರದಿಂದ ಬಾಲಕನಿಗೆ ಚಿಕಿತ್ಸೆ ನೀಡಲಾಗುತ್ತಿತ್ತಾದರೂ ಚಿಕಿತ್ಸೆ ಫಲಕಾರಿಯಾಗಿರಲಿಲ್ಲ. ಇಂದು ಬೆಳಗ್ಗೆ ಬಾಲಕನ ಮೆದುಳು ನಿಷ್ಕ್ರಿಯವಾಗಿರುವುದನ್ನು ವೈದ್ಯರು ಘೋಷಿಸಿದರು. ಬಳಿಕ ಪುತ್ರನನ್ನು ಕಳೆದುಕೊಂಡ ಶೋಕದ ನಡುವೆಯೂ ಪೋಷಕರು ಆತನ ಅಂಗಾಂಗ ದಾನ ಮಾಡುವ ನಿರ್ಧಾರ ಕೈಗೊಳ್ಳುವ ಮೂಲಕ ಇತರರ ಬದುಕಿಗೆ ಬೆಳಕಾಗಿದ್ದಾರೆ.