ಪುತ್ತೂರು: ಮುಖ್ಯ ರಸ್ತೆಯ ಪ್ರಕಾಶ್ ಫೂಟ್‌ವೇರ್ ಅಂಗಡಿಗೆ ಕಳ್ಳರು ನುಗ್ಗಿ ಅಂಗಡಿಯಲ್ಲಿಟ್ಟಿದ್ದ ಲಕ್ಷಾಂತರ ರೂಪಾಯಿ ನಗದು ಕಳವು ಮಾಡಿದ ಘಟನೆ ಸೆ.16ರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಈ ಬಗ್ಗೆ ಪ್ರಕಾಶ್ ಫೂಟ್‌ವೇರ್ ಮಳಿಗೆಯ ಮಾಲಕ ಸಮೀರ್ ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಮೀರ್ ಪುತ್ತೂರು ಬಸ್ ನಿಲ್ದಾಣದ ಬಳಿಯ ಮಾಯಿದೆ ದೇವುಸ್ ಚರ್ಚ್ ಎದುರುಗಡೆ ‘ಪ್ರಕಾಶ್ ಫೂಟ್‌ವೇರ್’ ಎಂಬ ಹೆಸರಿನ ಚಪ್ಪಲಿ ಅಂಗಡಿಯನ್ನು ಹೊಂದಿದ್ದು, ಅಲ್ಲದೇ ಬೆಂಗಳೂರಿನಿಂದ ಹಳೆಯ ಕಾರುಗಳನ್ನು ಖರೀದಿಸಿ ತಂದು ಪುತ್ತೂರಿನಲ್ಲಿ ಮಾರಾಟ ಮಾಡುವ ವ್ಯವಹಾರವನ್ನು ಮಾಡುತ್ತಿದ್ದು, ಅದರಂತೆ ಕಾರು ವ್ಯವಹಾರದ ಬಗ್ಗೆ ಸಮೀರ್ ರವರಲ್ಲಿದ್ದ ನಗದು ಹಣ ರೂ.8,00,000/- ಮತ್ತು ಸ್ನೇಹಿತ ಸಿದ್ದೀಕ್ ರವರು ನೀಡಿದ ನಗದು ಹಣ ರೂ.7,00,000/- ವನ್ನು ಒಟ್ಟು ಸೇರಿಸಿ ಡ್ರಾವರ್‌ನಲ್ಲಿ ಇಟ್ಟು ಹೋಗಿದ್ದರು. ಸೆ.16 ರಂದು ಅಂಗಡಿಯನ್ನು ನೋಡಿಕೊಳ್ಳುತ್ತಿದ್ದ ತಾಜುದ್ದೀನ್ ರವರು ಸಮೀರ್ ರವರಿಗೆ ಅಂಗಡಿಯಲ್ಲಿ ಕಳ್ಳತನವಾದ ವಿಚಾರವನ್ನು ತಿಳಿಸಿರುತ್ತಾರೆ. ಅದರಂತೆ ಸಮೀರ್ ಪುತ್ತೂರಿಗೆ ಬಂದು ಅಂಗಡಿಯಲ್ಲಿ ನೋಡುವಾಗ ಅಂಗಡಿಯ ಹಂಚು ಛಾವಣಿಯ ಮಾಡಿನ ಹಂಚನ್ನು ತೆಗೆದು ಯಾರೋ ಕಳ್ಳರು ಅಂಗಡಿ ಮುಚ್ಚಿಗೆಯನ್ನು ಮುರಿದು ಒಳ ಪ್ರವೇಶಿಸಿ ಅಂಗಡಿಯ ಡ್ರಾವರ್‌ನಲ್ಲಿದ್ದ ವ್ಯಾಪಾರದ ಹಣ ರೂ 24,500/- ಮತ್ತು ಹಿಂಬದಿ ಮರದ ಬಾಕ್ಸ್ ನಲ್ಲಿಟ್ಟಿದ್ದ ರೂ 14,50,000/- ನಗದು ಹಣವನ್ನು ಹಾಗೂ ಅಂಗಡಿಯ ಸಿಸಿ ಕ್ಯಾಮರಾದ ಡಿವಿಆರ್ ನ್ನು ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದಿರುತ್ತದೆ. ಒಟ್ಟು ಕಳವಾದ ಹಣ 14,74,500/- ಮತ್ತು ಡಿವಿಆರ್ ನ ಮೌಲ್ಯ ರೂ. 10,000/-ಆಗಿರುತ್ತದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಠಾಣೆಯಲ್ಲಿ ಅ.ಕ್ರ: 76/2022 ಕಲಂ: 454, 457, 380 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿದೆ.