ಪುತ್ತೂರು: ಬನ್ನೂರು ಗ್ರಾ.ಪಂ ವ್ಯಾಪ್ತಿಯ ದಾರಂದಕುಕ್ಕು ಎಂಬಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬಸ್ ನಿಲ್ದಾಣ ನಿಗದಿ ಈ ಹಿಂದೆ ನಿಗದಿಪಡಿಸಿದ ಸ್ಥಳದಲ್ಲಿಯೇ ನಿರ್ಮಾಣವಾಗಬೇಕು. ಒಬ್ಬರ ಹಿತ್ತಾಶಕ್ತಿಗಾಗಿ ಬದಲಾಯಿಸಬಾರದು. ಸ್ಥಳಾಂತರಿಸಿದರೆ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ ಘಟನೆ ಮುರ ಗೌಡ ಸಮುದಾಯ ಭವನದಲ್ಲಿ ನಡೆದ ಅಪರ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯದಲ್ಲಿ ನಡೆಯಿತು.
ಕಬಕ ಗ್ರಾಮದ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯವು ಸೆ.17 ರಂದು ನಡೆಯಿತು. ಸಭೆಯಲ್ಲಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ನಾಗೇಶ್ ಕೆಮ್ಮಾಯಿ ಮಾತನಾಡಿ, ಈ ಹಿಂದೆ ಬಸ್ ತಂಗುದಾಣವನ್ನು ಚತುಷ್ಪಥ ರಸ್ತೆ ಕಾಮಗಾರಿಗಾಗಿ ತೆರವುಗೊಳಿಸಲಾಗಿದೆ. ಹೊಸ ಬಸ್ ನಿಲ್ದಾಣ ನಿರ್ಮಾಣಕ್ಕೆ ಸರ್ವೆ ನಡೆಸ ಸರಕಾರಿ ಜಾಗವನ್ನು ಗುರುತಿಸಿ ಕಾಮಗಾರಿ ಪ್ರಾರಂಭಿಸಲಾಗಿದೆ. ಆದರೆ ಇದಕ್ಕೆ ಒಂದು ಮನೆಯವರು ಆಕ್ಷೇಪ ಸಲ್ಲಿಸುತ್ತಿದ್ದಾರೆ. ಒಂದು ಮನೆಯಿಂದಾಗಿ ೧೩೬೦ಕ್ಕೂ ಅಧಿಕ ಮನೆಯ ನಿವಾಸಿಗಳಿಗೆ ಅನ್ಯಾಯವಾಗುತ್ತಿದೆ. ಸರ್ವೆಯರ್, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸರ್ವೆ ನಡೆಸಿ, ಜಾಗದ ನಕ್ಷೆ ತಯಾರಿಸಿಕೊಟ್ಟ ಬಳಿಕ ಕಾಮಗಾರಿ ಪ್ರಾರಂಭಿಸಿದ್ದು ಈಗ ನೊಟೀಸ್ ನೀಡಿಲ್ಲ ಎಂಬ ಕಾರಣಕ್ಕೆ ಮರು ಸರ್ವೆಗೆ ಅವರು ಮನವಿ ಮಾಡುತ್ತಾರೆ. ಈಗ ಕಾಮಗಾರಿ ಪ್ರಾರಂಭಗೊಂಡಿದೆ. ಮತ್ತೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಶಾಸಕರು ಮಾಜಿ ಯೋಧರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಅವರ ವಿರುದ್ದವೂ ಆರೋಪ ಮಾಡುತ್ತಾರೆ. ಪತ್ರಿಕೆಯಲ್ಲಿ ವಿನಾಕಾರಣ ಅಪಪ್ರಚಾರ ಮಾಡಿ ಜನರ ದಾರಿ ತಪ್ಪಿಸುತ್ತಿದ್ದಾರೆ. ಕಾಮಗಾರಿ ಪ್ರಾರಂಭಗೊಂಡ ಬಳಿಕ ಗೇಟು ಇಟ್ಟು ಯೋಧನ ಮನೆಗೆ ಹೋಗುಲು ರಸ್ತೆಯಿಲ್ಲ ಎಂದು ಆರೋಪಿಸುತ್ತಿದ್ದಾರೆ. ಇದು ಸುಳ್ಳು ಆರೋಪ. ಇದೀಗ ಒಂದು ಮನೆಯವರಿಂದ ಸಮಸ್ಯೆ ಉಂಟಾಗಿದೆ. ಕಳೆದ ಮೂರು ವರ್ಷಗಳಿಂದ ಬಸ್ ನಿಲ್ದಾಣ ಇಲ್ಲದೆ ಜನ ಕಂಗೆಟ್ಟಿದ್ದಾರೆ. ಇಲ್ಲೇ ತಂಗುದಾಣ ಆಗಬೇಕೆಂದು ವಿದ್ಯಾರ್ಥಿಗಳೂ ಪ್ರತಿಭಟನೆ ನಡೆಸಿದ್ದಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಈ ಕುರಿತು ಅಪರ ಜಿಲ್ಲಾಧಿಕಾರಿಗಳು ಸಹಾಯಕ ಆಯುಕ್ತರಲ್ಲಿ ಮಾಹಿತಿ ಪಡೆದುಕೊಂಡರು. ನಮ್ಮ ಈ ಸಮಸ್ಯೆಗೆ ಇಲ್ಲಿಯೇ ಪರಿಹಾರ ದೊರೆಯಬೇಕು. ಇಲ್ಲದಿದ್ದರೆ ಇಲ್ಲಿಂದ ತೆರಲುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದರು.
ಬನ್ನೂರು ಗ್ರಾ.ಪಂ ಅಧ್ಯಕ್ಷೆ ಜಯ ಏಕ, ತಾ.ಪಂ ಮಾಜಿ ಅಧ್ಯಕ್ಷ ಜಯಾನಂದ ಕೋಡಿಂಬಾಡಿ, ಕೋಡಿಂಬಾಡಿ ಗ್ರಾ.ಪಂ ಅಧ್ಯಕ್ಷ ರಾಮಚಂದ್ರಪೂಜಾರಿ, ಸೇರಿದಂತೆ ಚಿಕ್ಕಮುಡ್ನೂರು, ಬನ್ನೂರು, ಬೆಳ್ಳಿಪ್ಪಾಡಿ ಹಾಗೂ ಕೋಡಿಂಬಾಡಿಯ ಹಲವು ಮಂದಿ ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮುರದ ಬಾರ್ ಸ್ಥಳಾಂತರಿಸಿ:
ಕಬಕ ಗ್ರಾಪಂ ವ್ಯಾಪ್ತಿಯ ಮುರ ಎಂಬಲ್ಲಿ ಸಾರ್ವಜನಿಕರ ವಿರೋಧದ ನಡುವೆ ಇತ್ತೀಚೆಗೆ ತೆರೆದುಕೊಂಡ ಬಾರ್‌ನ್ನು ಅಲ್ಲಿಂದ ಸ್ಥಳಾಂತರಿಸಬೇಕು ಸುದರ್ಶನ್ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಈ ಕುರಿತು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಅಪರ ಜಿಲ್ಲಾಧಿಕಾರಿಗಳು ಈ ಕುರಿತು ಅಬಕಾರಿ ಇನ್‌ಸ್ಪೆಕ್ಟರ್ ಅವರನ್ನು ವಿಚಾರಿಸಿದಾಗ, ಪ್ರತಿಕ್ರಿಯೆ ನೀಡಿದ ಅಬಕಾರಿ ಇನ್‌ಸ್ಪೆಕ್ಟರ್, ಅಬಕಾರಿ ಇಲಾಖೆ ನಿಯಮದಂತೆ ಬಾರ್ ತೆರೆಯಲಾಗಿದೆ. ಈ ವಿಚಾರದಲ್ಲಿ ನಮ್ಮ ಇಲಾಖೆಯ ತಪ್ಪಿಸಲ್ಲ ಎಂದು ಸ್ಪಷ್ಟಪಡಿಸಿದರು.
ಕಾಲುವೆ ಒತ್ತುವರಿ ಮಾಡಿದರೆ ನೋಟೀಸ್ ನೀಡದೆ ತೆರವುಗೊಳಿಸಿ:
ಕಬಕ ಪಂಚಾಯತ್ ವ್ಯಾಪ್ತಿಯಲ್ಲಿ ಕಾಲುವೆಯನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಗ್ರಾಮಸ್ಥರ ದೂರುಗಳಿಗೆ ಪ್ರತಿಕ್ರಿಯಿಸಿದ ಅಪರ ಜಿಲ್ಲಾಧಿಕಾರಿ ಎಚ್.ಕೆ ಕೃಷ್ಣಮೂರ್ತಿ ಮಾತನಾಡಿ, ಕಾಲುವೆಯ ಜಾಗ ಅತಿಕ್ರಮಣ ಆಗಿದ್ದರೆ ಯಾವುದೇ ನೋಟೀಸ್ ನೀಡದೇ ತೆರವು ಮಾಡಿ. ಇಂದು ಬೆಂಗಳೂರು, ನಾಳೆ ನಮ್ಮೂರು. ಆದ್ದರಿಂದ ತೆರವು ಕಾರ್ಯವನ್ನು ನಿರ್ದಾಕ್ಷಿಣ್ಯವಾಗಿ ಮಾಡಿ ಎಂದು ಅವರು ಕಂದಾಯ ಅಧಿಕಾರಿಗಳು ಸೇರಿದಂತೆ ಗ್ರಾಪಂಗಳಿಗೆ ಕಡಕ್ ಆದೇಶ ನೀಡಿದರು.
ಕಬಕದ ಪದೆಂಜಾರು ಎಂಬಲ್ಲಿ ನಮ್ಮ ಮನೆಗೆ ತೆರಳಲು ರಸ್ತೆ ವ್ಯವಸ್ಥೆಯಿಲ್ಲ. ರಸ್ತೆ ಮಾಡಬೇಕಾದರೆ ಖಾಸಗಿ ಜಾಗ ಬಿಟ್ಟುಕೊಡಬೇಕಾಗಿದೆ ಎಂದು ತಿಳಿಸಿದಾಗ, ಜಾಗವನ್ನು ಪರಿಶೀಲನೆ ನಡೆಸಿ ಸರಕಾರಿ ಜಾಗವಾಗಿದ್ದರೆ ಕೂಡಲೇ ನಿರ್ಮಿಸಿಕೊಡಬೇಕು. ಖಾಸಗಿಯಾಗಿದ್ದರೆ ಅವರನ್ನು ಮನವರಿಕೆ ಮಾಡಿ ರಸ್ತೆ ನಿರ್ಮಿಸಿಕೊಡುವಂತೆ ಸೂಚಿಸಿದರು.
ಹೋಬಳಿ ಬದಲಾವಣೆ ಸರಕಾರದ ಮಟ್ಟದಲ್ಲಿ ಆಗಬೇಕು:
ಕಬಕ ಗ್ರಾಮವು ಉಪ್ಪಿನಂಗಡಿ ಹೋಬಳಿಯಲ್ಲಿದ್ದು ಅದನ್ನು ಬದಲಾಯಿಸುವಂತೆ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಹೋಬಳಿ ಬದಲಾವಣೆ ಸರಕಾರ ಮಟ್ಟದಲ್ಲಿ ಸಾಧ್ಯ. ನಮ್ಮ ಮಟ್ಟದಲ್ಲಿ ಅಸಾಧ್ಯ ಎಂದು ತಿಳಿಸಿದರು.
ಜಂಟಿಯಾಗಿ ತನಿಖೆ ನಡೆಸಿ:
ಕೋಡಿಂಬಾಡಿ ಗ್ರಾ.ಪಂಗೆ ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಎಲ್ಲೇ ಜಾಗ ಗುರುತಿಸಿದರೂ ಅದಕ್ಕೆ ಆಕ್ಷೇಪಣೆ ಬರುತ್ತದೆ. ಈಗ ಕೊನೆಗೆ ಒಂದು ಕಡೆ ಜಾಗ ಗುರುತಿಸಲಾಗಿದ್ದರೂ ಅಲ್ಲಿ ನೀರಿನ ಜಾಗ ಎಂದು ತಾಲೂಕು ಆರೋಗ್ಯಾಧಿಕಾರಿಗಳು ವರದಿ ನೀಡಿರುತ್ತಾರೆ. ಹೀಗಾಗಿ ತ್ಯಾಜ್ಯ ವಿಲೇವಾರಿ ಮಾಡಲು ಜಾಗವಿಲ್ಲದಂತಾಗಿ ಎಂದು ಕೋಡಿಂಬಾಡಿ ಗ್ರಾ.ಪಂ ಅಧ್ಯಕ್ಷ ರಾಮಚಂದ್ರ ಪೂಜಾರಿ ಅಪರ ಜಿಲ್ಲಾಧಿಕಾರಿ ಹಾಗೂ ಶಾಸಕರಲ್ಲಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಸಂಜೀವ ಮಠಂದೂರು, ಸಾರ್ವಜನಿಕರ ಆರೋಗ್ಯ ದೃಷ್ಠಿಯಿಂದ ಕಸ ವಿಲೇವಾರಿ ಘಟಕ, ಪ್ರತೀ ಗ್ರಾಪಂ ವ್ಯಾಪ್ತಿಯಲ್ಲಿ ಸ್ಮಶಾಸ ನಿರ್ಮಾಣ, ಕುಡಿಯುವ ನೀರು ಮುಂತಾದವುಗಳನ್ನು ಆದ್ಯತೆ ನೆಲೆಯಲ್ಲಿ ಗ್ರಾಮಸ್ಥರಿಗೆ ನೀಡುವುದು ಮುಖ್ಯ. ಈ ನಿಟ್ಟಿನಲ್ಲಿ ಗ್ರಾಪಂ, ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆ ತುರ್ತಾಗಿ ಸಭೆ ನಡೆಸಿ ಚರ್ಚಿಸಬೇಕು ಎಂದು ಇಲಾಖೆಗಳಿಗೆ ಸೂಚನೆ ನೀಡಿದರು.
ಈ ಕುರಿತು ಕಂದಾಯ, ಗ್ರಾ.ಪಂ, ಆರೋಗ್ಯ ಹಾಗೂ ಅರಣ್ಯ ಇಲಾಖೆಯವರು ಜಂಟಿಯಾಗಿ ತನಿಖೆ ನಡೆಸಿ ಜಾಗ ಮಂಜೂರು ಮಾಡುವಂತೆ ಅಪರ ಜಿಲ್ಲಾಧಿಕಾರಿಗಳು ಸೂಚಿಸಿದರು.
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮಾಣಿ-ಪುತ್ತೂರು ಮಧ್ಯೆ ಹೆಚ್ಚುವರಿ ಬಸ್ ಒದಗಿಸಿ, ಕುಂಬ್ರ- ಕಬಕ ಬಸ್ ನ್ನು ವಿದ್ಯಾಪುರಕ್ಕೆ ವಿಸ್ತರಿಸಬೇಕು. ಕಬಕ ಪೇಟೆಯಲ್ಲಿ ಗೂಡ್ಸ್ ವಾಹನ ಪಾರ್ಕಿಂಗ್ ನಲ್ಲಿ ಸರಕಾರಿ ಜಾಗ ಅತಿಕ್ರಮಣ ಮಾಡಿರುವ ಬಗ್ಗೆ ಗ್ರಾಮಸ್ಥರ ದೂರಿಗೆ ಪ್ರತಿಕ್ರಿಯಿಸಿದ ಅಪರ ಜಿಲ್ಲಾಧಿಕಾರಿಯವರು ಹಾಕಿರುವ ಒತ್ತುವರಿಯನ್ನು ತೆರವುಗೊಳಿಸಿ, ಮತ್ತೆ ಬೇಲಿ ಹಾಕಿದರೆ ಕೇಸು ದಾಖಲಿಸಿ ಎಂದು ಪಿಡಿಓರವರಿಗೆ ಸೂಚಿಸಿದರು.
ಕಬಕ-ಪದ್ನಡ್ಕ ಪಂಚಾಯತ್ ರಸ್ತೆ ಖಾಸಗಿ ವ್ಯಕ್ತಿಯೋರ್ವರು ತನ್ನ ಜಾಗ ಎಂದು ಸರಕಾರಿ ಜಾಗ ಎಂದು ಆಕ್ಷೇಪ ಸಲ್ಲಿಸುತ್ತಿದ್ದಾರೆ. ಈಗ ಶಾಸಕ ಅನುದಾನ ಮಂಜೂರಾದರೂ ಕಾಮಗಾರಿ ನಡೆಸುವಂತಿಲ್ಲ ಎಂಬ ಗ್ರಾಮಸ್ಥರ ಆರೋಪಕ್ಕೆ ಸರ್ವೆ ನಡೆಸಿ ೧೦ ದಿನದಲ್ಲಿ ರಸ್ತೆ ನಿರ್ಮಿಸಲು ತಹಶಿಲ್ದಾರ್ ಹಾಗೂ ಪಿಡಿಓರವರಿಗೆ ಸೂಚಿಸಿದರು.
ನಗರ ಹಾಗೂ ಪಟ್ಟಣಕ್ಕೆ ಹೊಂದಿಕೊಂಡಿರುವ ಗ್ರಾಮಗಳ ನಿವಾಸಿಗಳಿಗೆ ಅಕ್ರಮ-ಸಕ್ರಮ, ೯೪ ಸಿ, ೯೪ಸಿಸಿ ಮೊದಲಾದ ಯೋಜನೆಗಳ ಪ್ರಯೋಜನ ಪಡೆದುಕೊಳ್ಳುವಲ್ಲಿ ವಂಚಿತರಾಗುತ್ತಿದ್ದು ಇದನ್ನು ಪರಿಹರಿಸಿಕೊಡುವಂತೆ ರವಿ ಮುಂಗ್ಲಿಮನೆ ಶಾಸಕರು ಹಾಗೂ ಅಪರ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಪ್ರತಿಕ್ರಿಯಿಸಿದ ಶಾಸಕರು, ಫಾರಂ೫೭ರಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡುವ ಕುರಿತು ಮಸೂದೆ ಮಾಡಲಾಗಿದೆ ಎಂದರು.
ಗ್ರಾಮ ವಾಸ್ತವ್ಯವನ್ನು ಉದ್ಘಾಟಿಸಿದ ಅಪರ ಜಿಲ್ಲಾಧಿಕಾರಿ ಎಚ್.ಕೆ ಕೃಷ್ಣಮೂರ್ತಿ ಮಾತನಾಡಿ, ಆಡಳಿತಾತ್ಮಕ ವಿಷಯಗಳಿಗೆ ಜನರ ಅಪಹವಾಲು, ಸಮಸ್ಯೆಗಳನ್ನು ಸ್ವೀಕರಿಸಿ, ಸ್ಥಳದಲ್ಲಿಯೇ ಪರಿಹಾರ ನೀಡಲು ಗ್ರಾಮ ವಾಸ್ತವ್ಯವನ್ನು ಹಮ್ಮಿಕೊಳ್ಳಲಾಗಿದೆ. ಸಮಸ್ಯೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಸಮಸ್ಯೆಗಳು ಸರಕಾರ ಮಟ್ಟದಲ್ಲಿ ಇತ್ಯರ್ಥವಾಗಬೇಕಿದ್ದರೆ ಅದನ್ನು ಸರಕಾರದ ಗಮನಕ್ಕೆ ನೀಡಲಾಗುವುದಲ್ಲದೆ ಅದಕ್ಕೆ ಸಹಕಾರ ನೀಡಲಾಗುವುದು. ಸಮಸ್ಯೆಗಳನ್ನು ಕೋಲಂಕುಷವಾಗಿ ಪರಿಶೀಲಿಸಿ ಕ್ರಮಕೈಗೊಳ್ಳಲಾಗವುದು. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ವಿವಿಧ ಯೋಜನೆಗಳ ಹಕ್ಕು ಪತ್ರಗಳನ್ನು ವಿತರಿಸಿದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಸರಕಾರದ ಯೋಜನೆಗಳನ್ನು ಮನೆ ಬಾಗಿಲಿಗೆ ಮುಟ್ಟಿಸುವ ನಿಟ್ಟಿನಲ್ಲಿ ಸರಕಾರ ಅಧಿಕಾರಿಗಳ ಗ್ರಾಮ ವಾಸ್ತವ್ಯವನ್ನು ಹಮ್ಮಿಕೊಂಡಿದೆ. ಸರಕಾರದ ಯೋಜನೆ ಫಲಾನುಭವಿಗಳ ಮನೆಬಾಗಿಲಿಗೆ ತಲುಪಿ ಸ್ವಾವಲಂಬಿ, ಸ್ವಾಭಿಮಾನಿ ಜೀವನ ಮಾಡಬೇಕು ಎಂಬ ದೃಷ್ಟಿಯಿಂದ ಇಂತಹಾ ಕಾರ್ಯಕ್ರಮಗಳು ನಡೆಯುತ್ತಿದೆ. ಒಟ್ಟಿನಲ್ಲಿ ಪ್ರತಿಯೊಂದು ಗ್ರಾಪಂಗಳು ಅಭಿವೃದ್ಧಿ ದೃಷ್ಟಿಯಿಂದ ಮೋಡೆಲ್ ಪಂಚಾಯಿತಿ ಆಗಬೇಕು ಎಂದು ಅವರು ಹೇಳಿದರು.
ವಿವಿಧ ಪಿಂಚಣಿ, ಹಕ್ಕುಪತ್ರ ವಿತರಣೆ:
ಕಾರ್ಯಕ್ರಮದಲ್ಲಿ ಇಂದಿರಾಗಾಂಧಿ ವೃದ್ಧಾಪ್ಯ ವೇತನ, , ಸಂಧ್ಯಾ ಸುರಕ್ಷಾ, ಅಂಗವಿಕಲ, ನಿರ್ಗತಿಕ ವಿಧವಾ ವೇತನ ಹಾಗೂ ೯೪ಸಿ ಯೋಜನೆಯ ಹಕ್ಕುಪತ್ರಗಳನ್ನು ಫಲಾನುಭವಿಗಳಿಗೆ ಶಾಸಕ ಸಂಜೀವ ಮಠಂದೂರು ವಿತರಿಸಿದರು.
ಸಾಲು ಸಾಲಾಗಿ ಬಂದ ಗ್ರಾಮಸ್ಥರು:
ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ತಮ್ಮ ವಿವಿಧ ಬೇಡಿಕೆ, ಸಮಸ್ಯೆಗಳ ಅಹವಾಲುಗಳೊಂದಿಗೆ ಗ್ರಾಮಸ್ಥರು ಸಾಲು ಸಾಲಾಗಿ ಬಂದು ಅಹವಾಲು ನೀಡಿದರು.
ತಹಸೀಲ್ದಾರ್ ನಿಸರ್ಗಪ್ರಿಯ, ಆಹಾರ ಇಲಾಖೆಯ ಉಪನಿರ್ದೇಶಕ ಮಾಣಿಕ್ಯ, ಕೃಷಿ ಇಲಾಖೆಯ ಉಪನಿರ್ದೇಶಕ ಶಿವಶಂಕರ, ಸೀತಾ, ಭೂಮಾಪನ ಇಲಾಖೆ ಉಪನಿರ್ದೇಶಕ ನಿರಂಜನ್, ನಗರಸಭೆ ಪೌರಾಯುಕ್ತ ಮಧು ಎಸ್.ಮನೋಹರ್, ಅರಣ್ಯ ಇಲಾಖೆ ಸಹಾಯಕ ಸಂರಕ್ಷಣಾಧಿಕಾರಿ ವಿ.ಪಿ.ಕಾರ್ಯಪ್ಪ, ಕಬಕ ಗ್ರಾಪಂ ಉಪಾಧ್ಯಕ್ಷ ರುಕ್ಮಯ್ಯ ಗೌಡ, ಸದಸ್ಯರು ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುದಾನ ಶಾಲಾ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಉಪತಹಶೀಲ್ದಾರ್ ಸುಲೋಚನಾ ಪಿ.ಕೆ ಸ್ವಾಗತಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್, ತಾಲೂಕು ಕಚೇರಿಯ ದಯಾನಂದ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಅಪರ ಜಿಲ್ಲಾಧಿಕಾರಿ ಎಚ್.ಕೆ ಕೃಷ್ಣಮೂರ್ತಿಯವರು ಕಬಕ ಗ್ರಾಮದ ಶೇವಿರೆ ಮೊದಲಾದ ಪ್ರದೇಶಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿದರು. ಸಹಾಯಕ ಆಯುಕ್ತ ಗಿರೀಶ್ ನಂದನ್, ತಹಶೀಲ್ದಾರ್ ನಿಸರ್ಗಪ್ರಿಯ, ಕಬಕ ಗ್ರಾ.ಪಂ ಅಧ್ಯಕ್ಷ ವಿನಯ ಕುಮಾರ್ ಹಾಗೂ ಪಿಡಿಓ ಆಶಾ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.