ಶಿವಮೊಗ್ಗ: ಶಂಕಿತ ಉಗ್ರರಾದ ಮಾಜ್, ಯಾಸೀನ್ ಬಂಧನ ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ಉಗ್ರರ ಜೊತೆ ಸಂಪರ್ಕ ಹೊಂದಿದ್ದ ಶಬ್ಬೀರ್ನನ್ನು ಶಿವಮೊಗ್ಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಹಣ್ಣಿನ ವ್ಯಾಪಾರ ಮಾಡುತ್ತಿದ್ದ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಆರೋಪಿ ಶಬ್ಬೀರ್ ಅರೆಸ್ಟ್ ಆಗಿದ್ದಾನೆ. ಗಂಗಾವತಿಯ ಬನ್ನಿಗಿಡ ಕ್ಯಾಂಪ್ನಲ್ಲಿ ಹೋಲ್ ಸೇಲ್ ಹಣ್ಣಿನ ಅಂಗಡಿ ಇಟ್ಟುಕೊಂಡಿದ್ದ ಆರೋಪಿ ಹಣ್ಣು ವ್ಯಾಪಾರದ ನೆಪದಲ್ಲಿ ಶಂಕಿತರೊಂದಿಗೆ ಸಂಪರ್ಕ ಹೊಂದಿದ್ದ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಶಿವಮೊಗ್ಗದಲ್ಲಿ ಬಂಧಿತರಾದ ಶಂಕಿತ ಉಗ್ರರ ತನಿಖೆ ತೀವ್ರಗೊಂಡಿದೆ. ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ಮತ್ತು ದೆಹಲಿಯಿಂದ ಬಂದಿರೋ RAW ಅಧಿಕಾರಿಗಳು ಶಂಕಿತರ ವಿಚಾರಣೆ ನಡೆಸಿದ್ದಾರೆ. ಕೆಲ ದಿನಗಳ ಹಿಂದೆ ಶಂಕಿತರಾದ ಮಾಜ್ ಮತ್ತು ಸೈಯದ್ ಯಾಸೀನ್ ಮೊಬೈಲ್ ಹುಡುಕಾಡಿದಾಗ ಪಾಕಿಸ್ತಾನದ ಲಿಂಕ್ ಇರೋ ಬಗ್ಗೆ ಅನುಮಾನ ವ್ಯಕ್ತವಾಗಿತ್ತು.
ಶಂಕಿತ ಉಗ್ರ ಯಾಸೀನ್‌ಗೆ ಪಾಕಿಸ್ತಾನದ ಟೆರರ್ ಲಿಂಕ್ ಇತ್ತಾ ಅನ್ನೋ ಅನುಮಾನ ಬಂದಿತ್ತು. ಯಾಕಂದ್ರೆ, ಬಂಧಿತ ಯಾಸೀನ್ ಪಾಕ್‌ಗೆ ಹೋಗಿ ಬಂದಿರುವ ಶಂಕೆ ವ್ಯಕ್ತವಾಗಿದ್ದು, ಮೊಬೈಲ್ ಪರಿಶೀಲಿಸಿದಾಗ ಸ್ಫೋಟಕ ಸಂಗತಿ ಬಹಿರಂಗವಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಇದೇ ಯಾಸೀನ್ ಪಾಕ್ ಬಗ್ಗೆಯೇ ಹೆಚ್ಚಾಗಿ ಸರ್ಚಿಂಗ್ ಮಾಡಿದ್ದ. ಹೀಗಾಗಿ ಯಾಸೀನ್ ಪಾಕಿಸ್ತಾನಕ್ಕೆ ಹೋಗಿದ್ದೆ ಆಗಿದ್ರೆ, ಯಾವ ಉದ್ದೇಶಕ್ಕೆ ಹೋಗಿದ್ದ. ಪಾಕಿಸ್ತಾನದಲ್ಲಿ ಯಾರನ್ನಾದ್ರೂ ಭೇಟಿಯಾಗಿದ್ನಾ ಅನ್ನೋದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಶಂಕಿತ ಉಗ್ರರಾದ ಮಾಜ್ ಮತ್ತು ಯಾಸೀನ್ ಮೊಬೈಲ್ ಶೋಧಿಸಿದಾಗ ಕೇವಲ ವಿದೇಶಿ ಆ್ಯಪ್‌ಗಳೇ ಇರೋದು ಕಂಡು ಬಂದಿದೆ. ಅಲ್ಲದೇ, ವಿದೇಶಿ ಸರ್ವರ್ ಹೊಂದಿದ್ದ ಆ್ಯಪ್‌ಗಳನ್ನೇ ಬಳಸುತ್ತಿದ್ದ ಶಂಕಿತರ ಮೊಬೈಲ್‌ನಲ್ಲಿ 12ಕ್ಕೂ ಹೆಚ್ಚು ಮೆಸೆಂಜರ್ ಆ್ಯಪ್‌ಗಳಿದ್ವು ಅನ್ನೋದು ಗೊತ್ತಾಗಿದೆ. ವೈರ್ ಮತ್ತು ಸಿಗ್ನಲ್ ಹೆಸರಿನ ಆ್ಯಪ್‌ಗಳಿಂದಲೇ ಮಾಜ್ ಮತ್ತು ಯಾಸೀನ್ ವಿದೇಶದಲ್ಲಿರುವವರನ್ನ ಸಂಪರ್ಕ ಮಾಡ್ತಿದ್ರು. ಹೀಗಾಗಿ ಡಾರ್ಕ್‌ವೆಬ್ ಬಳಸುತ್ತಿದ್ರಾ ಅನ್ನೋ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.