ಪುತ್ತೂರು: ದೀಪಾವಳಿಯ ಅಂಗವಾಗಿ ರೈ ಎಸ್ಟೇಟ್ ಎಜ್ಯುಕೇಶನ್ & ಚಾರಿಟೇಬಲ್ ಟ್ರಸ್ಟ್‌ನ ದಶ ಸಂಭ್ರಮದ ಕಾರ್ಯಕ್ರಮದಲ್ಲಿ ಈ ವರ್ಷ ಸುಮಾರು 26000 ಮಂದಿಗೆ ವಸ್ತ್ರ ವಿತರಣೆ ನಡೆಯಲಿದೆ.
ಕಾರ್ಯಕ್ರಮವು ಅ.26 ರಂದು ಪುತ್ತೂರು ಕಿಲ್ಲೆ ಮೈದಾನದಲ್ಲಿ ಆಯೋಜಿಸಿಕೊಳ್ಳಲಾಗಿದೆ ಎಂದು ಟ್ರಸ್ಟ್‌ನ ಪ್ರವರ್ತಕರಾದ ಅಶೋಕ್ ಕುಮಾರ್ ರೈ ಕೆ.ಎಸ್ ಹೇಳಿದರು. ಮರೀಲ್ ಪುತ್ತೂರು ಕ್ಲಬ್‌ನಲ್ಲಿ ಅ.8 ರಂದು ಸಂಜೆ ನಡೆದ ಕಾರ್ಯಕ್ರಮದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

ಪ್ರತಿವರ್ಷ ಕೋಡಿಂಬಾಡಿಯಲ್ಲಿರುವ ರೈ ಎಸ್ಟೇಟ್‌ನಲ್ಲಿ ದೀಪಾವಳಿಗೆ ವಸ್ತ್ರ ವಿತರಿಸಲಾಗುತ್ತಿತ್ತು. ಈಗ ರಸ್ತೆ ಅಗಲೀಕರಣದಲ್ಲಿ ಮನೆಯಂಗಲ ಕಿರಿದಾಗಿದೆ. ಅಲ್ಲದೆ ಕಳೆದ ಎರಡು ವರ್ಷಗಳ ಹಿಂದೆ ಸುಮಾರು 12,800 ಮಂದಿಗೆ ವಸ್ತ್ರ ವಿತರಣೆ ಮಾಡಲಾಗಿದೆ. ಹೀಗಾಗಿ ವರ್ಷ ದೊಡ್ಡ ಪ್ರಮಾಣದಲ್ಲಿ ಜನರು ಸೇರುವ ನಿರೀಕ್ಷೆ ಇದ್ದು ಪುತ್ತೂರು ಕಿಲ್ಲೆ ಮೈದಾನದಲ್ಲಿ ಆಯೋಜಿಸಿಕೊಳ್ಳಲಾಗಿದೆ. ಈ ವರ್ಷ ಸಾಂಸ್ಕೃತಿಕ ಕಾರ್ಯಕ್ರಮ, ಸಭಾ ಕಾರ್ಯಕ್ರಮ ಹಾಗೂ ಅನ್ನಸಂತರ್ಪಣೆ ಆಯೋಜಿಸಿಕೊಳ್ಳಲಾಗಿದೆ ಎಂದರು.

ಕಾರ್ಯಕ್ರಮವು ಬೆಳಿಗ್ಗೆ 9 ಗಂಟೆಗೆ ಪ್ರಾರಂಭಗೊಳ್ಳಲಿದೆ. ಪ್ರಾರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆದ ಬಳಿಕ ಸಭಾ ಕಾರ್ಯಕ್ರಮ ನಡೆಯಲಿದೆ. 11 ಗಂಟೆಯಿಂದ ಅನ್ನಸಂತರ್ಪಣೆ ಪ್ರಾರಂಭಗೊಳ್ಳಲಿದೆ. ಕಳೆದ ಎರಡು ವರ್ಷಗಳಲ್ಲಿ ಕೊರೋನಾದಿಂದಾಗಿ ವಸ್ತ್ರ ವಿತರಣೆ ಸಾಧ್ಯವಾಗಿಲ್ಲ. ಹೀಗಾಗಿ ಈವರ್ಷ ಅಧಿಕ ಸಂಖ್ಯೆಯಲ್ಲಿ ಜನರ ಆಗಮಿಸಲಿದ್ದು ಸುಮಾರು 26000 ಮಂದಿಗೆ ವಸ್ತ್ರ ವಿತರಿಸಲಾಗುವುದು. ಅಲ್ಲದೆ ಹೆಚ್ಚುವರಿಯಾಗಿ 5000 ಮಂದಿಗೆ ಬೇಕಾದಷ್ಟು ಸಂಗ್ರಹಿಸಿಡಲಾಗುವುದು. ಈ ಎಲ್ಲಾ ಕಾರ್ಯಕ್ರಗಳ ಯಶಸ್ಸಿಗೆ ವಿವಿಧ ಉಪ ಸಮಿತಿಗಳನ್ನು ರಚಿಸಲಾಗಿದೆ. ದೊಡ್ಡ ಪ್ರಮಾಣದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಪ್ರತಿಯೊಬ್ಬರೂ ಕೈಜೋಡಿಸಿ, ಸಹಕರಿಸಬೇಕು ಎಂದು ಅಶೋಕ್ ರೈ ತಿಳಿಸಿದರು.
ಕಾರ್ಯಕ್ರಮದಲ್ಲಿ ಗೂಡುದೀಪ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಬೆಳಿಗ್ಗೆ 6.20ಕ್ಕೆ ಸ್ಪರ್ಧೆ ನಡೆಯಲಿದೆ.

ಮನೆಯಲ್ಲಿ ತಯಾರಿಸಿದ ಗೂಡುದೀಪಗಳೊಂದಿಗೆ ಸ್ಪರ್ಧೆಯಲ್ಲಿಭಾಗವಹಿಸಬಹುದು. ಅಲ್ಲದೆ ಕಾರ್ಯಕ್ರಮದಲ್ಲಿ ಅಡಿಕೆ ಕೊಯ್ಯುವವರು, ಬುಟ್ಟಿ ಹೆಣೆಯುವವರು, ಪೋಸ್ಟ್‌ಮೆನ್, ಪವರ್‌ಮೆನ್, ಆಟೋ ಚಾಲಕ, ಬೀಡಿ ಹಾಗೂ ಹೈನುಗಾರಿಕೆಯಲ್ಲಿ ಕುಟುಂಬ ನಿರ್ವಹಣೆ ಮಾಡುವಂತ ಸ್ವಾಭಿಮಾನಿ ಬಡವರನ್ನು ಗುರುತಿಸಿ ಸನ್ಮಾನಿಸಲಾಗುವುದು ಎಂದು ಅವರು ತಿಳಿಸಿದರು.

90 ಮನೆ ನಿರ್ಮಾಣ, 15,800 ಮನೆಗೆ ಧನ ಸಹಾಯ:
ನಮ್ಮ ಟ್ರಸ್ಟ್‌ನಿಂದ 10 ವರ್ಷಗಳಲ್ಲಿ 15,800 ಮನೆಗೆ ನೇರ ಧನಸಹಾಯ ನೀಡಲಾಗಿದೆ. ನಮ್ಮ ಟ್ರಸ್ಟ್ ದೇಣಿಗೆ ನೀಡಿರುವದೇ ಯಾರಿಂದಲೂ ಪಡೆದುಕೊಂಡಿಲ್ಲ. ನಮ್ಮ ಸಂಪಾದನೆಯ ಒಂದು ಪಾಲು ಬಡವರ ಅಭಿವೃದ್ಧಿಗಾಗಿ ಮೀಸಲಿಡಲಾಗಿದೆ. ಮನೆಯಿಲ್ಲದವರಿಗೆ ವಾಸಕ್ಕೆ ಯೋಗ್ಯವಾದ 90 ಮನೆಗಳನ್ನು ನಿರ್ಮಿಸಿಕೊಡಲಾಗಿದೆ. ವಿವಿಧ ಕಾರಣಗಳಿಂದ ಮಾಶಾಸನ ಪಡೆಯುವವರಿಗೆ ಸಹಕಾರ, ವಿದ್ಯುತ್, ನೀರಿನ ಸಂಪರ್ಕವಿಲ್ಲದವರಿಗೆ ಸೌಲಭ್ಯ, ಮನೆ ಕಟ್ಟಲು ನಾನಾ ಕಾರಣಗಳಿಂದ ವಂಚಿತರಾಗಿದ್ದವರಿಗೆ ಸಹಕಾರ, ಸರಕಾರದ ಯೋಜನೆಗಳನ್ನು ಪಡೆದುಕೊಳ್ಳಲು ಸಾಧ್ಯವಾಗದ ಬಡವರಿಗೆ ಟ್ರಸ್ಟ್‌ನ ಜನರಿಗೆ ತಲುಪಿಸುವ ಕಾರ್ಯವಾಗಿದೆ. ಇದಕ್ಕಾಗಿ ಕಚೇರಿ ತೆರದು ಅಲ್ಲಿ ಸಿಬಂದಿಗಳನ್ನು ನೇಮಕ ಮಾಡಲಾಗಿದೆ. 10 ವರ್ಷಗಳಿಂದ ನಿರಂತರ ಸೇವೆ ನೀಡುತ್ತಾ ಬಂದಿದೆ.
ಟ್ರಸ್ಟ್‌ನ ಮುಖಾಂತರ 400 ಯುವಕರಿಗೆ ವಾಹನ ಚಾಲನಾ ತರಬೇತಿ ಹಾಗೂ ಲೈಸನ್ಸ್, 4000 ಮಹಿಳೆಯರಿಗೆ ಟೈಲರಿಂಗ್ ತರಬೇತಿ ಹಾಗೂ ಮೆಶಿನ್, 3400 ಮಂದಿ ಕಾರ್ಮಿಕರಿಗೆ ಕಟ್ಟಡ ಕಾರ್ಮಿಕರ ನೋಂದಾವಣೆ, ವಿದ್ಯಾರ್ಥಿಗಳಿಗೆ ಬಸ್ ಪಾಸ್ ಹಾಗೂ ಪಾನ್‌ಕಾರ್ಡ್‌ಗಳನ್ನು ಉಚಿತವಾಗಿ ಮಾಡಿಕೊಡಲಾಗಿದೆ. ನಾನಾ ಕಾರಣಗಳಿಂದ ಅಕ್ರಮ-ಸಕ್ರಮ, 94ಸಿಯ ಹಕ್ಕುಪತ್ರ ಪಡೆಯಲು ಅಸಾಧ್ಯವಾಗಿದ್ದವರಿಗೆ ಅವುಗಳನ್ನು ಒದಗಿಸಿಕೊಡುವ ಮೂಲಕ ಸಮಾಜದಲ್ಲಿ ಕಷ್ಟದಲ್ಲಿದ್ದವರ ಕಣ್ಣೀರು ಒರೆಸುವ ಕೆಲಸ ಟ್ರಸ್ಟ್‌ನ ಮೂಲಕ ನಡೆಸಲಾಗಿದೆ ಎಂದು ಅಶೋಕ್ ರೈಯವರು ತಿಳಿಸಿದರು.

ಗ್ರಾಮ ಸಮಿತಿ ರಚನೆ:
ಕಾರ್ಯಕ್ರಮದ ಯಶಸ್ವಿಗಾಗಿ ಪುತ್ತೂರಿನ 44 ಗ್ರಾಮಗಳಲ್ಲಿಯೂ ಸಭೆಗಳನ್ನು ನಡೆಸಿ ಅಲ್ಲಿ ಸಮಿತಿಗಳನ್ನು ರಚಿಸಿಕೊಳ್ಳಲಾಗುವುದು ಎಂದು ಅಶೋಕ್ ರೈಯವರು ತಿಳಿಸಿದರು. ವಿವಿಧ ಗ್ರಾಮಗಳಿಂದ ಬಂದಿರುವವರನ್ನು ಕಾರ್ಯಕ್ರಮದಲ್ಲಿ ಗ್ರಾಮ ಸಮಿತಿ ಸೇರಿಸಿಕೊಳ್ಳಲಾಯಿತು.

ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಶಶಿ ಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ, ಅಶೋಕ್ ರೈಯವರು ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವ ಜೊತೆಗೆ ಬಡವರ ಕಷ್ಟಗಳಿಗೆ ಸ್ಪಂಧಿಸುವ ಮನೋಭಾವ ಅವರಲ್ಲಿದೆ. ತನ್ನ ಸಂಪಾದನೆಯ ಒಂದು ಭಾಗವನ್ನು ಬಡವರ ಅಭಿವೃದ್ಧಿಗಾಗಿ ಮೀಸಲಿಡುತ್ತಾರೆ. ತನ್ನ ಹುಟ್ಟು ಹಬ್ಬವನ್ನು ಏಡ್ಸ್ ಪೀಡಿತರೊಂದಿಗೆ ಆಚರಿಸುವಂತ ಸರಳ ಮನೋಭಾವದವರಾಗಿದ್ದಾರೆ. ಬಡರನ್ನು ಒಟ್ಟು ಸೇರಿಸುವ ಅಶೋಕ್ ರೈಯವರ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮದ ಯಶಸ್ವಿಗೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದರು.

ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮಾತನಾಡಿ, ನಾನು ಸಹಕಾರಿ ಸಂಘದ ಅಧ್ಯಕ್ಷನಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ. ಅಶೋಕ್ ರೈಯವರ ಅಭಿಮಾನಿಯಾಗಿ ಭಾಗವಹಿಸಿದ್ದೇನೆ. ಪಕ್ಷ, ಜಾತಿ, ಮತ, ಬೇಧವಿಲ್ಲದೆ ನಡೆಯುವ ಕಾರ್ಯಕ್ರಮದಲ್ಲಿ ಎಲ್ಲರೂ ಕೈಜೋಡಿಸಬೇಕು. ಈ ಕಾರ್ಯಕ್ರಮವು ಪುತ್ತೂರಿನ ಇತಿಹಾಸದ ಪುಟದಲ್ಲಿ ಮೂಡಿಬೇಕು ಎಂದರು.
ಪಾಣಾಜೆ ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೋಳಿಲ್ಲಾಯ ಮಾತನಾಡಿ, ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಸಾಮಾಜಿಕವಾಗಿ ಸ್ಪಂಧಿಸುತ್ತಿರುವ ಅಶೋಕ್ ರೈಯವರು ವ್ಯಕ್ತಿಯಲ್ಲ. ಅವರು ಒಬ್ಬ ಶಕ್ತಿ. ಪಾಣಾಜೆ ರಣಮಂಗಲ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶ ಯಶಸ್ವೀಯಾಗಿ ನೆರವೇರುವಲ್ಲಿ ಅಶೋಕ್ ರೈಯವರು ಪಾತ್ರ ಪ್ರಮುಖವಾಗಿದೆ. ಅವರ ಮೇಲೆ ದೊಡ್ಡ ಋಣವಿದೆ. ಅದರನ್ನು ತೀರಿಸುತ್ತೇವೆ ಎಂದರು. ಸೀತಾರಾಮ ಶೆಟ್ಟಿ ಹೆಗ್ಡೆಹಿತ್ತಿಲು, ಮಾಮೇಶ್ವರ ಶ್ರೀಉಮಾಮಹೇಶ್ವರ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ವಿಶ್ವನಾಥ ಗೌಡ ನಾಯ್ತೊಟ್ಟು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗೌರವಾರ್ಪಣೆ:
ಕಾಂತಾರ ಕನ್ನಡ ಚಲನಚಿತ್ರದಲ್ಲಿ ಗುತ್ತಿನ ಮನೆಯ ಯಜಮಾನನಾಗಿ ಪಾತ್ರವಹಿಸಿದ ಎರ್ತೂರು ರಾಜೀವ ರೈಯವರನ್ನು ಕಾರ್ಯಕ್ರಮದಲ್ಲಿ ಶಾಲು ಹೊದಿಸಿ ಗೌರವಿಸಲಾಯಿತು.

ಮಠಂತಬೆಟ್ಟು ಶ್ರೀಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ನಿರಂಜನ ರೈ ಮಠಂತಬೆಟ್ಟು ಸ್ವಾಗತಿಸಿದರು. ಸಂತೋಷ್ ಕುಮಾರ್ ಶಾಂತಿನಗರ ಕಾರ್ಯಕ್ರಮ ನಿರೂಪಿಸಿ ಕೋಡಿಂಬಾಡಿ ಗ್ರಾ.ಪಂ ಸದಸ್ಯ ಜಯಪ್ರಕಾಶ್ ಬದಿನಾರು ವಂದಿಸಿದರು.


























