ಕಡಬ : ವ್ಯಕ್ತಿಯೋರ್ವರ ಮೃತದೇಹ ಕಾಡಿನಲ್ಲಿ ಕವಚಿ ಬಿದ್ದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ.
ಮೃತ ವ್ಯಕ್ತಿಯನ್ನು ಕಡಬ ತಾಲೂಕಿನ ದೋಳ್ಪಾಡಿ ಗ್ರಾಮದ ದಿ. ಕೊರಗಪ್ಪ ಎಂಬವರ ಪುತ್ರ ದೇವರಾಜ ಎಂದು ಗುರುತಿಸಲಾಗಿದೆ.
ದೇವರಾಜ ಲಾರಿ ಚಾಲಕನಾಗಿದ್ದು, ಕಾಣಿಯೂರು ಗ್ರಾಮದ ನಾವೂರಿನ ಅನಿತಾ ಎಂಬವರನ್ನು 13 ವರ್ಷಗಳ ಹಿಂದೆ ವಿವಾಹವಾಗಿದ್ದು, ಅವರಿಗೆ ಇಬ್ಬರು ಮಕ್ಕಳಿದ್ದಾರೆ.
ದೇವರಾಜನ ಅಮಲು ಪದಾರ್ಥ ಸೇವಿಸಿ ಆಗಾಗ ಪತ್ನಿ ಅನಿತಾಳೊಂದಿಗೆ ಜಗಳ ಮಾಡುತ್ತಿದ್ದು, ಹಲವು ಬಾರಿ ಕುಟುಂಬಸ್ಥರು ಬುದ್ದಿವಾದ ತಿಳಿಸಿದ್ದರು. ನ.28 ರಂದು ರಾತ್ರಿ ದೇವರಾಜ ಅಮಲು ಪದಾರ್ಥ ಸೇವಿಸಿ ಹೆಂಡತಿ ಜತೆ ಜಗಳವಾಡಿದ್ದು, ಅವರ ತಂದೆ ನಾಗಪ್ಪ ಅವರು ಮನೆಗೆ ಬಂದು ಬುದ್ಧಿವಾದ ಹೇಳಿದ್ದರು. ಡಿ.29 ರಂದು ದೇವರಾಜ ನಾಪತ್ತೆಯಾಗಿದ್ದು ಸ್ಥಳೀಯರು, ಮನೆಯವರು ದೋಳ್ಪಾಡಿ ಪರಿಸರದಲ್ಲಿ ಮತ್ತು ಎಲ್ಲಾ ಕಡೆಗಳಲ್ಲಿ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ.
ಡಿ.2 ರಂದು ದೇವರಾಜ ರವರ ಮೃತದೇಹ ದೋಳ್ಪಾಡಿ ಗ್ರಾಮದ ಕೊಜಂಬಾಡಿ ಅರಣ್ಯ ಪ್ರದೇಶದಲ್ಲಿ ಕವಚಿ ಬಿದ್ದುಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಕಡಬ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಕಡಬ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿದೆ.
























