ಮಂಗಳೂರು: ರಾಜ್ಯದ ಕರಾವಳಿ ಜಿಲ್ಲೆಗಳು ಅಂದರೆ ಕೋಮುಸೂಕ್ಷ್ಮ ಪ್ರದೇಶ. ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗ್ಗಾಗ್ಗೆ ಸಣ್ಣಪುಟ್ಟ ವಿಷಯಗಳಿಗೂ ಕೋಮು ಗಲಭೆ ನಡೆಯುತ್ತಿರುತ್ತದೆ. ಆದರೆ ಕೆಲವೊಂದು ವಿಚಾರಗಳಲ್ಲಿ ಕೋಮು ಸಾಮರಸ್ಯವೂ ಈ ಜಿಲ್ಲೆಯಲ್ಲಿ ಕಾಣ ಸಿಗುತ್ತದೆ. ಇಂತಹ ಕೋಮು ಸಾಮರಸ್ಯಕ್ಕೆ ಮತ್ತೊಂದು ಸೇರ್ಪಡೆ ಅನ್ನುವಂತೆ ಬೆಳ್ತಂಗಡಿ ತಾಲೂಕಿನ ಸವಣಾಲು ಗ್ರಾಮದಲ್ಲಿ ಒಂದು ಅಪರೂಪದ ವಿಷಯ ಬೆಳಕಿಗೆ ಬಂದಿದೆ.
ಸವಣಾಲು ಗ್ರಾಮದ ಇತಿಹಾಸ ಪ್ರಸಿದ್ಧ ಕಾಳಿಕಾಬೆಟ್ಟದ ಶ್ರೀ ದುರ್ಗಾ ಕಾಳಿಕಾಂಬ ಕ್ಷೇತ್ರದಲ್ಲಿ ಕಾಳಿಕಾಂಬೆಯ ಸ್ಥುತಿಯನ್ನು ಅದೇ ಗ್ರಾಮದ ಮುಸ್ಲಿಂ ಯುವಕ ರಮ್ಲಾನ್ ಎಂಬಾತ ಕಾಳಿಕಾಮಾತೆಗಾಗಿ ಹಾಡನ್ನು ರಚಿಸಿ, ಗಾಯನ ಮಾಡಿ ಕಾಳಿಕಾಂಬೆಗೆ ಅರ್ಪಣೆ ಮಾಡಿದ್ದಾರೆ.
ರಮ್ಲಾನ್ ಕಾಳಿಕಾಂಬ ದೇಗುಲದ ಪಕ್ಕದಲ್ಲೇ ವಾಸವಾಗಿದ್ದು, ಕಾಳಿಕಾಮಾತೆಯ ಪರಮ ಭಕ್ತನಾಗಿದ್ದಾರೆ. ಶ್ರೀ ದುರ್ಗಾ ಕಾಳಿಕಾಂಬ ಕ್ಷೇತ್ರದ ಪ್ರತಿಯೊಂದು ಕಾರ್ಯಕ್ರಮದಲ್ಲೂ ಶ್ರದ್ಧಾ ಭಕ್ತಿಯಿಂದ ಭಾಗವಹಿಸಿ ಸಾಮರಸ್ಯ ಮೆರೆದಿದ್ದಾರೆ. ಮುಸ್ಲಿಂನಾದರೂ ದುರ್ಗೆಯ ಆರಾಧನೆಯನ್ನು ಮುಕ್ತ ಮನಸ್ಸಿನಿಂದ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.. “ಮಹಿಮೆದ ಕಾರಣಿಕ ಕ್ಷೇತ್ರ ಕಾಳಿಕಾಬೆಟ್ಟ” ಎಂಬ ಭಕ್ತಿಗೀತೆಯನ್ನು ರಮ್ಲಾನ್ ಹಾಡಿದ್ದಾರೆ. ಎಲೆಕ್ಟ್ರೀಷಿಯನ್ ಆಗಿ ಕೆಲಸ ಮಾಡುತ್ತಿರುವ ರಮ್ಲಾನ್ ದುರ್ಗೆಯ ಬಗ್ಗೆ ಹಾಡನ್ನು ರಚಿಸಿ ಸ್ವ ಗಾಯನವನ್ನು ಮಾಡಿದ್ದಾರೆ. ರಮ್ಲಾನ್ ಸುಶ್ರಾವ್ಯ ಕಂಠದಿಂದ ದುರ್ಗೆಯ ಹಾಡು ಅದ್ಭುತವಾಗಿ ಮೂಡಿ ಬಂದಿದೆ. ರಮ್ಲಾನ್ ಹಾಡನ್ನು ಎಸ್.ಕೆ ಕ್ರಿಯೇಷನ್ ಎಂಬ ಯೂಟ್ಯೂಬ್ ಪೇಜ್ ನಲ್ಲಿ ನೋಡಬಹುದಾಗಿದೆ.