ಬೆಂಗಳೂರು: ರಾಜ್ಯದಲ್ಲಿ ಕೋವಿಡ್ 19 ಸೋಂಕು ಹರಡುವಿಕೆ ಉಲ್ಬಣವಾಗಿರುವುದರಿಂದ ರಾಜ್ಯ ಸರಕಾರವು ಸಾರ್ವಜನಿಕ ಸಮಾರಂಭ, ಆಚರಣೆಗಳು, ಮನರಂಜನೆ ಕಾರ್ಯಕ್ರಮಗಳಿಗೆ ಜನರ ಒಗ್ಗೂಡುವಿಕೆಗೆ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಿ ಆದೇಶ ಹೊರಡಿಸಿದೆ. ಸಾಮಾಜಿಕ ಆಚರಣೆಗಳು, ಸಮಾರಂಭಗಳಿಗೆ ಭಾರತ ಸರಕಾರದ ಮಾರ್ಗಸೂಚಿಯಂತೆ ಪ್ರತಿ ವ್ಯಕ್ತಿಗೆ 3.25 ಚ.ಮೀ ಮಾನದಂಡವನ್ನು ಪಾಲಿಸುವುದು ಕಡ್ಡಾಯವಾಗಿದೆ. ಮದುವೆಗಳಿಗೆ ತೆರೆದ ಪ್ರದೇಶದಲ್ಲಿ 200 ಮಂದಿ ಮೀರದಂತೆ, ಕಲ್ಯಾಣ ಮಂಟಪ, ಸಭಾಂಗಣಗಳು, ಹಾಲ್ಗಳು, ಇತ್ಯಾದಿ ಮುಚ್ಚಿದ ಪ್ರದೇಶಗಳಲ್ಲಿ 100 ಮಂದಿ ಮೀರಬಾರದು.
ಜನ್ಮದಿನ ಹಾಗೂ ಇತರೆ ಆಚರಣೆಗಳಿಗೆ ಸಂಬಂಧಿಸಿದಂತೆ ತೆರೆದ ಪ್ರದೇಶಗಳಲ್ಲಿ 50 ಮೀರದಂತೆ ಹಾಗು ಸಭಾಂಗಣಗಳು, ಹಾಲ್ಗಳ, ಇತ್ಯಾದಿ ಮುಚ್ಚಿದ ಪ್ರದೇಶಗಳಲ್ಲಿ 25 ಮಂದಿ ಮೀರಬಾರದು. ನಿಧನ, ಶವಸಂಸ್ಕಾರದ ಸಂದರ್ಭದಲ್ಲಿ ತೆರೆದ ಪ್ರದೇಶದಲ್ಲಿ 50 ಮಂದಿ ಮೀರದಂತೆ ಹಾಗೂ ಸಭಾಂಗಣಗಳು, ಹಾಲ್ಗಳ, ಇತ್ಯಾದಿ ಮುಚ್ಚಿದ ಪ್ರದೇಶಗಳಲ್ಲಿ 25 ಮಂದಿ ಮೀರಬಾರದು. ಅದೇ ರೀತಿ ಅಂತ್ಯಕ್ರಿಯೆ ಸಂದರ್ಭದಲ್ಲಿ 25 ಮಂದಿ ಮೀರಬಾರದು.
ಇತರೆ ಸಮಾರಂಭಗಳಿಗೆ ಸಂಬಂಧಿಸಿದಂತೆ 50 ಮಂದಿ ಮೀರದಂತೆ, ಹಾಲ್ನ ವಿಸ್ತೀರ್ಣಕ್ಕೆ ಅನುಗುಣವಾಗಿ ಅವಕಾಶ ಕಲ್ಪಿಸಬೇಕು. ಧಾರ್ಮಿಕ ಆಚರಣೆಗಳು, ಸಮಾರಂಭಗಳನ್ನು ನಿಷೇಧಿಸಲಾಗಿದೆ. ರಾಜಕೀಯ ಆಚರಣೆಗಳು, ಸಮಾರಂಭಗಳು ತೆರೆದ ಪ್ರದೇಶದಲ್ಲಿ ನಡೆಸಲು ಅವಕಾಶ ಕಲ್ಪಿಸಲಾಗಿದ್ದು, 200 ಮಂದಿ ಮೀರಬಾರದು ಎಂದು ಸರಕಾರ ಸೂಚನೆ ನೀಡಿದೆ.
ಈ ಸಂದರ್ಭಗಳಲ್ಲಿ ಜನರು ಕಡ್ಡಾಯವಾಗಿ ಭಾರತ ಸರಕಾರ ಮತ್ತು ರಾಜ್ಯ ಸರಕಾರದ ಸಂಬಂಧಪಟ್ಟ ಇಲಾಖೆಗಳು ಹೊರಡಿಸಿರುವ ಪ್ರಮಾಣಿತ ಕಾರ್ಯ ವಿಧಾನವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸಭಾಂಗಣ, ಕಲ್ಯಾಣ ಮಂಟಪ, ಸಿನಿಮಾ ಮಂದಿರ, ಹಾಲ್ಗಳು ಮತ್ತು ಆಚರಣೆಗಾಗಿ ಜನ ಸೇರುವ ಇತ್ಯಾದಿ ಪ್ರದೇಶಗಳ ಉಸ್ತುವಾರಿ ಹೊಂದಿರುವವರ ಕಡ್ಡಾಯವಾಗಿ ಸ್ಯಾನಿಟೈಝೇಷನ್ ಕ್ರಮಗಳನ್ನು ಅನುಸರಿಸಬೇಕು.
ಈ ಆದೇಶವನ್ನು ಬಿಬಿಎಂಪಿ ಆಯುಕ್ತರು, ಬೆಂಗಳೂರು ನಗರ ಪೊಲೀಸ್ ಆಯುಕ್ತರು, ಬೆಂಗಳೂರು ಗ್ರಾಮಾಂತರ ಮತ್ತ ಸಂಬಂಧಿಸಿದ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಆದೇಶ ಪಾಲನೆಯಲ್ಲಿ ಲೋಪವೆಸಗುವಂತಹವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005 ಸೆಕ್ಷನ್ 51 ರಿಂದ 60 ಹಾಗ ಭಾರತೀಯ ದಂಡ ಸಂಹಿತೆ ಹಾಗೂ ಅನ್ವಯವಾಗಬಹುದಾದ ಇತರ ಕಾನೂನು ಉಪಬಂಧಗಳ ಅನುಸಾರ ಕ್ರಮ ಕೈಗೊಳ್ಳುವಂತೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಆದೇಶದಲ್ಲಿ ತಿಳಿಸಿದ್ದಾರೆ.