ಬೆಳ್ತಂಗಡಿ : ತಾಲೂಕಿನ ಕಣಿಯೂರು ಗ್ರಾಮದ ಪದ್ಮುಂಜ ಸರಕಾರಿ ಪ್ರೌಢಶಾಲೆಯ ಕಂಪ್ಯೂಟರ್ ಕೊಠಡಿಯಿಂದ ಸುಮಾರು 20 ಸಾವಿರ ರೂ. ಬೆಲೆ ಬಾಳುವ 16 ಬ್ಯಾಟರಿಗಳು ಕಳವುಗೊಂಡಿರುವ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ.
ಶಾಲಾ ಕಟ್ಟಡದ ಕೊನೆಯ ಭಾಗದಲ್ಲಿರುವ ಗಣಕಯಂತ್ರ ಕೊಠಡಿಯಿಂದ ಬ್ಯಾಟರಿಗಳು ಕಳವುಗೊಂಡಿದೆ. ಈ ಕೊಠಡಿಯ ಬಾಗಿಲನ್ನು ವಿದ್ಯಾರ್ಥಿಗಳ ಗಣಕಯಂತ್ರ ತರಗತಿಯ ಸಮಯದಲ್ಲಿ ಮಾತ್ರ ತೆರೆಯಲಾಗುತ್ತಿತ್ತು.
ಡಿ.19 ರಂದು ಕೊನೆಯ ಕಂಪ್ಯೂಟರ್ ತರಗತಿ ಇದ್ದು, ಆ ದಿನ ಸಂಜೆ ತರಗತಿ ಮುಗಿಸಿ ಕೊಠಡಿಗೆ ಬೀಗ ಹಾಕಿ ತೆರಳಲಾಗಿತ್ತು. ಆ ಬಳಿಕ ಜ.11 ರಂದು ಮಧ್ಯಾಹ್ನ ವಿದ್ಯಾರ್ಥಿಗಳಿಗೆ ಗಣಕಯಂತ್ರ ತರಗತಿ ನಡೆಸಲೆಂದು ಸದ್ರಿ ಕೊಠಡಿಯ ಬಳಿ ಶಿಕ್ಷಕರು ಹೋದ ವೇಳೆ ಕೊಠಡಿಯ ಶಟರ್ ಬಾಗಿಲಿಗೆ ಹಾಕಿದ್ದ ಬೀಗದ ಕೊಂಡಿ ತುಂಡರಿಸಿ ಬಾಗಿಲಿಗೆ ಸಿಕ್ಕಿಸಿರುವುದು ಕಂಡು ಬಂದಿದೆ. ಬಳಿಕ ಕೊಠಡಿಯ ಬಾಗಿಲು ತೆರೆದು ಒಳಗೆ ಪ್ರವೇಶಿಸಿ ನೋಡಿದಾಗ ಗಣಕ ಯಂತ್ರಗಳಿಂದ ಕಳಚಿ ಪ್ರತ್ಯೇಕವಾಗಿ ತೆಗೆದಿರಿಸಿದ್ದ 16 ಬ್ಯಾಟರಿಗಳು ಕಳವಾಗಿರುವುದು ಬೆಳಕಿಗೆ ಬಂದಿದೆ.
ಕೊಠಡಿಯಲ್ಲಿರುವ ಉಳಿದ ಎಲ್ಲಾ ಸೊತ್ತುಗಳು ಯಥಾಸ್ಥಿತಿಯಲ್ಲಿವೆ. ಕಳವಾದ 16 ಬ್ಯಾಟರಿಗಳ ಅಂದಾಜು ಮೌಲ್ಯ 20 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಶಾಲೆಯ ಚಿತ್ರಕಲಾ ಶಿಕ್ಷಕ ಸದಾನಂದ ಬಿರಾದಾರ ಎಂಬವರು ನೀಡಿದ ದೂರಿನಂತೆ ಉಪ್ಪಿನಂಗಡಿ ಠಾಣೆಯಲ್ಲಿ ಕಲಂ: 454, 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ..