ಚಿಕ್ಕಮಗಳೂರು: 2012ರ ಏಪ್ರಿಲ್ ತಿಂಗಳಲ್ಲಿ ತಯಾರಾಗಿರುವ ರೋಗಿಗಳ ದೇಹದಲ್ಲಿ ಶಕ್ತಿ ವೃದ್ಧಿಸಲು ಬಳಸುವ ಗ್ಲೂಕೋಸ್ ಪ್ಯಾಕೇಟಿನ ಮೇಲೆ 2021ರ ಏಪ್ರಿಲ್ ತಿಂಗಳ ಲೇಬಲ್ ಹಾಕಿ 9 ವರ್ಷದ ಹಳೇ ಗ್ಲೂಕೋಸನ್ನು ಮಾರಾಟ ಮಾಡುತ್ತಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ನಗರದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿರುವ ಜನರಿಕ್ ಮೆಡಿಸನ್ ಔಷಧಿ ಕೇಂದ್ರದಲ್ಲಿ ಈ ರೀತಿಯ ಗ್ಲೂಕೋಸ್ ಪ್ಯಾಕೇಟ್ ಪತ್ತೆಯಾಗಿದೆ. ಸೋಮವಾರ ನಗರದ ಗುರು ಎಂಬವರು ತಮ್ಮ ಸಂಬಂಧಿಕರಿಗೆ ಆರೋಗ್ಯ ಸರಿ ಇಲ್ಲ ಎಂದು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ವೈದ್ಯರು ಎಳನೀರು ಹಾಗೂ ಗ್ಲೂಕೋಸ್ ಕೊಡಲು ಹೇಳಿದ್ದರು. ಆಸ್ಪತ್ರೆಯ ಆವರಣದಲ್ಲೇ ಇದ್ದ ಮೆಡಿಕಲ್ ಸ್ಟೋರ್‍ನಲ್ಲಿ ಗ್ಲೂಕೋಸ್ ಪ್ಯಾಕೇಟ್ ಖರೀದಿಸಿದ್ದಾರೆ.
26 ರೂಪಾಯಿ ಇದ್ದ ಗ್ಲೂಕೋಸ್‍ಗೆ 13 ರೂಪಾಯಿ ತೆಗೆದುಕೊಂಡಿದ್ದಾರೆ. ಗ್ಲೂಕೋಸ್ ಖರೀದಿಸಿದ ಗುರು, ಅರ್ಧ ಹಣ ತೆಗೆದುಕೊಂಡದ್ದನ್ನ ಕಂಡು ಆಶ್ಚರ್ಯ ವ್ಯಕ್ತಪಡಿಸಿದ್ದರು. ಆದರೆ ಗುರು ಆಸ್ಪತ್ರೆಯ ವಾರ್ಡಿಗೆ ಬಂದು ನೋಡಿದಾಗ ಲೇಬಲ್ ಹಚ್ಚಿರುವುದು ಗೊತ್ತಾಗಿದೆ. ಲೇಬಲ್ ತೆಗೆದು ನೋಡಿದಾಗ ಮೂಲ ಪ್ಯಾಕೇಟ್ ಮೇಲಿದ್ದ 2012ನೇ ಇಸವಿಗೆ ಬ್ಲಾಕ್ ಮಾರ್ಕರ್‌ನಿಂದ ರಬ್ ಮಾಡಿ ಅದರ ಮೇಲೆ 2021ನೇ ಇಸವಿಯ ಲೇಬಲ್ ಹಾಕಿದ್ದಾರೆ.
ಕೂಡಲೇ ಒಂದು ಹೀಗಾಗಿರಬೇಕೆಂದು ಗುರು ತನ್ನ ಚಿಕ್ಕಪ್ಪನ ಮೂಲಕ ಅದೇ ಮೆಡಿಕಲ್ ಸ್ಟೋರ್‍ನಿಂದ ಮತ್ತೊಂದು ಗ್ಲೂಕೋಸ್ ಪ್ಯಾಕೇಟ್ ಖರೀದಿಸಿದ್ದಾರೆ. ಅದರ ಮೇಲೂ ಅದೇ ರೀತಿಯ ಲೇಬಲ್ ಹಾಕಿರುವುದು ಕಾಣಿಸಿದೆ. ಅದನ್ನು ಕಿತ್ತಾಗಲು ಆ ಪ್ಯಾಕೇಟ್ ಕೂಡ 2012ರಲ್ಲಿ ತಯಾರಾಗಿರುವುದಾಗಿತ್ತು. ಇದನ್ನು ಮಕ್ಕಳು ರೋಗಿಗಳಿಗೆ ಕೊಟ್ಟರೆ ಕಥೆ ಏನೆಂದು ಖರೀದಿಸಿದ ಗುರು ಕೂಡ ಕಂಗಾಲಾಗಿದ್ದಾರೆ.
ಇದು 9 ವರ್ಷ ಹಿಂದಿನ ಗ್ಲೂಕೋಸ್. ಇದರ ವಾಯಿದೆ ಇರುವುದೇ 24 ತಿಂಗಳು ಮಾತ್ರ. ಬಳಿಕ ಇದು ಔಷಧಿಯಾದರೂ ವಿಷವಾಗುತ್ತೆ. ಇದನ್ನು ರೋಗಿಗಳು ಬಳಸಿದರೆ ಅವರ ಆರೋಗ್ಯ ಏನಾಗಬೇಡ ಎಂದು ಖರೀದಿಸಿದಾತ ಆತಂಕಕ್ಕೀಡಾಗಿದ್ದಾರೆ. 24 ತಿಂಗಳು ವ್ಯಾಲಿಡಿಟಿಯ ಈ ಗ್ಲೂಕೋಸ್ ಪ್ಯಾಕೇಟಿನ ವಾಯಿದೆ ಮುಗಿದೇ 9 ವರ್ಷ ಕಳೆದಿವೆ. ಇದನ್ನು ಹೇಗೆ ಮಾರಾಟ ಮಾಡುತ್ತಿದ್ದಾರೆ. ಜಿಲ್ಲಾಡಳಿತ ಹಾಗೂ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಹಕ ಗುರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.