ಬೆಳ್ತಂಗಡಿ: ವ್ಯಕ್ತಿಯೊಬ್ಬರಿಗೆ ಸೇರಿದ ನಾಗ ಬನದಲ್ಲಿ ದೇವರಿಗೆ ಪೂಜೆ ಸಲ್ಲಿಸುತಿದ್ದಾಗ ಹೆಜ್ಜೇನುಗಳ ಗುಂಪೊಂದು ದಾಳಿ ಮಾಡಿದ್ದು ಅರ್ಚಕರ ಸಹಿತ ಹಲವರನ್ನು ಗಾಯ ಗೊಳಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದಲ್ಲಿ ಎ .20 ರಂದು ಬೆಳಿಗ್ಗೆ ನಡೆದಿದೆ.
ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಕುಂಡಡ್ಕದ ಅರುವಾಲು ಬಾಲಕಕೃಷ್ಣ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ಉಮೇಶ್(40), ರಾಧ(35), ವಿನೀತ್(15) , ಕುನ್ಯಪ್ಪ(70),ಕಮಲ(55), ರತ್ನಕರ(50),ಭಾರತಿ(45), ಶೀನ(40) ಗಂಭೀರವಾಗಿ ಗಾಯಗೊಂಡ ಎಂಟು ಮಂದಿ.
ಅರುವಾಲು ಮನೆಯಿಂದ ಎರಡು ಕಿ.ಮೀ ದೂರದಲ್ಲಿ ಇರುವ ನಾಗಬನದಲ್ಲಿ ಇಂದು ಬೆಳಗ್ಗೆ ಬಾಲಕೃಷ್ಣ ಮತ್ತು ಅವರ ಕುಟುಂಬಸ್ಥರು ಪೂಜೆ ಹಮ್ಮಿಕೊಂಡಿದ್ದರು. ಪೂಜೆ ನಡೆಯುತ್ತಿದ್ದ ಸಂದರ್ಭ ಇದ್ದಕ್ಕಿದ್ದಂತೆ ಹೆಜ್ಜೇನುಗಳ ಗುಂಪೊಂದು ಅಲ್ಲಿ ನೆರೆದಿದ್ದವರ ಮೇಲೆಲ್ಲ ದಾಳಿ ನಡೆಸಿ ಕಡಿದಿದೆ. ಪೂಜೆ ಮಾಡುತ್ತಿದ್ದ ಮೂವರು ಅರ್ಚಕರಲ್ಲಿ ಇಬ್ಬರಿಗೆ ಹೆಜ್ಜೆನು ದಾಳಿ ಮಾಡಿದೆ. ಪೂಜೆಯ ವೇಳೆ ಹೊಗೆ ಬನದಲ್ಲಿದ್ದ ಜೇನು ಗೂಡಿಗೆ ಹೋಗಿದ್ದು ಈ ವೇಳೆ ಸ್ಥಳದಲ್ಲಿದ್ದ ಸುಮಾರು 25 ಕ್ಕೂ ಹೆಚ್ಚು ಜನರ ಮೇಲೆ ಜೇನು ಹುಳಗಳು ದಾಳಿ ಮಾಡಿದೆ.ಗಂಭೀರ ಗಾಯಗೊಂಡ ಎಂಟು ಮಂದಿಯನ್ನು ಉಜಿರೆ ಬೆನಕ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಇನ್ನೂ ಕೆಲವರನ್ನು ಸ್ಥಳೀಯ ಅಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.