ಮಂಗಳೂರು: 2020ರಲ್ಲಿ ನಡೆದ ಸುಳ್ಯದ ಉದ್ಯಮಿಯೊಬ್ಬರ ಕೊಲೆ ಪ್ರಕರಣದ ಆರೋಪಿಯನ್ನು ಇನ್ನೂ ಬಂಧಿಸದ ಪೊಲೀಸರ ಕ್ರಮ ಪ್ರಶ್ನಿಸಿ ಸಲ್ಲಿಸಲಾಗಿದ್ದ ರಿಟ್ ಅರ್ಜಿ ಮೇರೆಗೆ ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹಾಗೂ ಮೂಲ್ಕಿ ಠಾಣೆಯ ಎಸ್‌ಎಚ್‌ಒಗೆ ರಾಜ್ಯ ಹೈಕೋರ್ಟ್‌ನಿಂದ ಸಮನ್ಸ್ ಜಾರಿಯಾಗಿದೆ.
ಉದ್ಯಮಿ ಲತೀಫ್ ಕೊಲೆ ಪ್ರಕರಣದಲ್ಲಿ 10 ಮಂದಿ ಆರೋಪಿಗಳ ಪೈಕಿ 9 ಮಂದಿಯ ಬಂಧನವಾಗಿದೆ. ಉಳಿದ ಒಬ್ಬ ಆರೋಪಿಯ ಬಂಧನವಾಗದ ಕಾರಣ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿತ್ತು.
ನ್ಯಾಯವಾದಿ ಬಾಲಕೃಷ್ಣ ಎಂ. ಆರ್. ವಾದಿಸಿದ್ದರು. ಬಂಧನ ವಿಳಂಬದ ಬಗ್ಗೆ ಫೆ.13ರೊಳಗೆ ವರದಿ ಒಪ್ಪಿಸುವಂತೆ ಸೂಚಿಸಲಾಗಿದೆ.
ಪ್ರಮುಖ ಆರೋಪಿಗಳಾದ ಕಾರ್ನಾಡಿನ ದಾವೂದ್ ಹಕೀಂ, ಮುಹಮ್ಮದ್ ಬಾವಾ ಯಾನೆ ಟಿಂಬರ್ ಬಾವ, ಉಲ್ಲಂಜೆ ನಿವಾಸಿ ಮುಹಮ್ಮದ್ ವಫಾ ಯಾನೆ ಮುಸ್ತಫಾ, ಕಾರ್ನಾಡ್ ನಿವಾಸಿ ಮುಹಮ್ಮದ್ ರಾಝಿಮ್, ಬಪ್ಪನಾಡು ನಿವಾಸಿ ಮುಹಮ್ಮದ್ ಹಾಶಿಮ್, ಉಡುಪಿಯ ಉಚ್ಚಿಲ ನಿವಾಸಿ ಅಬೂಬಕರ್ ಸಿದ್ದೀಕ್, ಬಪ್ಪನಾಡು ನಿವಾಸಿ ರಿಯಾಝ್ ಯಾನೆ ನಿಸಾರ್, ಕಾಪಿಕಾಡ್‌ನ ಮಯ್ಯದ್ದಿ, ಪಕ್ಷಿಕೆರೆಯ ಬಶೀರ್ ಹುಸೈನ್ ಎಂಬವರನ್ನು ಬಂಧಿಸಲಾಗಿತ್ತು.
ಆರೋಪಿ ಪಕ್ಷಿಕೆರೆಯ ಮುಸ್ತಾಫ್ನಿಗೆ ಹೈಕೋರ್ಟ್ ಜಾಮೀನು ನೀಡಿತ್ತು. ಅದನ್ನು ರದ್ದುಪಡಿಸುವಂತೆ ಕೊಲೆಯಾದ ಅಬ್ದುಲ್ ಲತೀಫ್ರ ಪತ್ನಿ, ನ್ಯಾಯವಾದಿ ಮುಬೀನಾ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಸ್ತಾಫ್ನ ಜಾಮೀನನ್ನು ರದ್ದುಗೊಳಿಸಿತ್ತು. ಆದರೆ ಆತನನ್ನು ಬಂಧಿಸದ ಕಾರಣ ರಿಟ್ ಅರ್ಜಿ ಸಲ್ಲಿಸಲಾಗಿತ್ತು. ಆ ಹಿನ್ನೆಲೆಯಲ್ಲಿ ಫೆ.13ರಂದು ವರದಿ ನೀಡುವಂತೆ ಮಂಗಳೂರು ಪೊಲೀಸ್ ಆಯುಕ್ತರಿಗೆ ಸಮನ್ಸ್ ಜಾರಿಗೊಳಿಸಲಾಗಿದೆ.