ಸುರತ್ಕಲ್: ಕ್ಲುಲ್ಲಕ ಕಾರಣಕ್ಕೆ ಎರಡು ತಂಡಗಳ ನಡುವೆ ಮಾರಾಮಾರಿ ನಡೆದ ಘಟನೆ ಸುರತ್ಕಲ್ ಠಾಣಾ ವ್ಯಾಪ್ತಿಯ ಗಣೇಶ್ ಪುರ-ಕೈಕಂಬದಲ್ಲಿ ಬುಧವಾರ ರಾತ್ರಿ ನಡೆದಿದೆ.
ಬೈಕ್ ಗೆ ಕಾರ್ ಡಿಕ್ಕಿಯಾದ ಕಾರಣಕ್ಕೆ ಇತ್ತಂಡಗಳು ಹೊಡೆದಾಡಿಕೊಂಡಿದ್ದು, ತಕ್ಷಣವೇ ಸ್ಥಳಕ್ಕೆ ಧಾವಿಸಿದ ಸುರತ್ಕಲ್ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಕಾರು ಇತ್ತೀಚಿಗೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಫಾಝಿಲ್ ಸಹೋದರ ಆದಿಲ್ ನದ್ದಾಗಿದ್ದು, ಇದು ಬೈಕಿನಲ್ಲಿ ಹೋಗುತ್ತಿದ್ದ ನಾಗೇಶ್ ಎಂಬವರ ಬೈಕಿಗೆ ತಾಗಿತ್ತು. ಪರಿಣಾಮ ಬೈಕಿನಲ್ಲಿ ಹೋಗುತ್ತಿದ್ದ ನಾಗೇಶ್ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದು ಗಾಯವಾಗಿದೆ. ಈ ವೇಳೆ ಎರಡು ಸಮುದಾಯದ ಜನ ಗುಂಪು ಸೇರಿ ಮಾತಿಗೆ ಮಾತು ಬೆಳೆದು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
ವಿಷಯ ತಿಳಿದ ಪೊಲೀಸರು ತಕ್ಷಣವೇ ಸ್ಥಳಕ್ಕೆ ಆಗಮಿಸಿ ಅಲ್ಲಿದ್ದ ಜನರನ್ನು ಚದುರಿಸಿದರು. ಬೈಕ್ ಸವಾರ ನಾಗೇಶ್ ಹಾಗೂ ಆದಿಲ್ ನ ಚಿಕ್ಕಪ್ಪ ಉಮರ್ ಫಾರೂಕ್ ಒಳರೋಗಿಯಾಗಿ ದಾಖಲಾಗಿದ್ದಾರೆ.
ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಇಬ್ಬರು ಆರೋಪ – ಪ್ರತ್ಯಾರೋಪ ಮಾಡಿ ಸುರತ್ಕಲ್ ಠಾಣೆಯಲ್ಲಿ ದೂರು – ಪ್ರತಿ ದೂರು ನೀಡಿದ್ದಾರೆ.