ಕಬಡ್ಡಿ ಆಡುತ್ತಿದ್ದ ವೇಳೆ ಹೃದಯಾಘಾತವಾಗಿ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟಿರುವ ಘಟನೆ ಬೆಂಗಳೂರು ನಗರ ಆನೇಕಲ್ ತಾಲೂಕಿನ ಅತ್ತಿಬೆಲೆಯ ಖಾಸಗಿ ಕಾಲೇಜಿನಲ್ಲಿ ನಡೆದಿದೆ.
ಧಾರವಾಡ ಮೂಲದ ಸಂಗೀತಾ(17) ಮೃತ ವಿದ್ಯಾರ್ಥಿನಿ.
ಕಬಡ್ಡಿ ಆಡುತ್ತಿರುವಾಗಲೇ ಕುಸಿದುಬಿದ್ದ ಸಂಗೀತಾಳನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಸಂಗೀತಾ ಮೃತಪಟ್ಟಿದ್ದರು.
ಅತ್ತಿಬೆಲೆಯ ಸೆಂಟ್ ಫಿಲೋಮಿನಾ ಶಾಲೆಯಲ್ಲಿ ಘಟನೆ ನಡೆದಿದೆ. ತಕ್ಷಣ ಆಕೆಯನ್ನು ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ. ಸಂಗೀತಾ ಧಾರವಾಡ ಮೂಲದವಳಾಗಿದ್ದು ಆನೇಕಲ್ ತಾಲೂಕಿನ ಬಳಗಾರನಹಳ್ಳಿಯಲ್ಲಿ ವಾಸವಿದ್ದರು ಎನ್ನಲಾಗಿದೆ.
ಕ್ರೀಡಾ ಉತ್ಸವದಲ್ಲಿ ಮಹಿಳೆಯರ ತಂಡದ ಕಬಡ್ಡಿ ಕೂಡ ಇತ್ತು, ಸಂಗೀತಾ ತನ್ನ ತಂಡದ ಪರವಾಗಿ ರೈಡಿಂಗ್ ಹೋಗಿದ್ದಳು. ಆಗ ಎದುರಾಳಿ ತಂಡದವರು ಆಕೆಯನ್ನು ಹಿಡಿಯಲು ಮುಂದಾಗಿದ್ದರು. ಆಗ ಒಮ್ಮೆಗೆ ಹೃದಯಾಘಾತಗೊಂಡು ಸಂಗೀತಾ ಕುಸಿದುಬಿದ್ದಿದ್ದಳು. ಕೂಡಲೇ ಆಕೆಯನ್ನು ಶಾಲಾ ಆಡಳಿತ ಮಂಡಳಿ ಆಸ್ಪತ್ರೆಗೆ ಕರೆದೊಯ್ದಿದ್ದರು.
ಅತ್ತಿಬೆಲೆ ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ಸಂಗೀತಾ ಮೃತದೇಹ ಸ್ಥಳಾಂತರಿಸಲಾಗಿದೆ. ವಿದ್ಯಾರ್ಥಿನಿ ಸಂಗೀತಾ ಸಾವು ಹಿನ್ನೆಲೆ ಇಂದು ಕಾಲೇಜಿಗೆ ರಜೆ ಘೋಷಿಸಲಾಗಿದೆ.