ವಿಟ್ಲ : ಕೊರೊನ ಸೋಂಕು ನಿಯಂತ್ರಿಸುವ ಹಿನ್ನೆಲೆಯಲ್ಲಿ ಸರಕಾರ ರೂಪಿಸಿರುವ ಎಲ್ಲಾ ನಿಯಮಗಳನ್ನು ಪಾಲಿಸಿಕೊಂಡು ಮದುವೆ ಕಾರ್ಯ ನಡೆಸಬೇಕು ಎಂದು ವಿಟ್ಲ ಠಾಣಾ ಎಸ್.ಐ ವಿನೋದ್ ರೆಡ್ಡಿಯವರು ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಎಲ್ಲಾ ಮದುವೆ ಹಾಲ್ ಗಳ ಮಾಲಕರಿಗೆ ಸೂಚನೆ ನೀಡಿದ್ದಾರೆ. ವಿಟ್ಲ ಠಾಣಾ ಪೊಲೀಸರು ಹಾಗೂ ಮದುವೆ ಹಾಲ್ಗಳ ಮಾಲಕರ ಸಭೆಯಲ್ಲಿ ಈ ಸೂಚನೆ ನೀಡಲಾಗಿದೆ.
ಹಾಲ್ನ ಒಳಗೆ ನಡೆಯುವ ಮದುವೆಗೆ 50 ಮಂದಿಗೆ ಹಾಗೂ ಹೊರಗೆ ನಡೆಯುವ ಮದುವೆಗೆ 50 ಮಂದಿಗೆ ಮಾತ್ರ ಪಾಲ್ಗೊಲ್ಲಬಹುದು. ಮದುವೆಯಲ್ಲಿ ಭಾಗವಹಿಸುವ ಪ್ರತೀಯೊಬ್ಬರು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯವಾಗಿದೆ. ಅಲ್ಲದೆ ಸರಕಾರ ರೂಪಿಸಿದ ಇತರ ಎಲ್ಲಾ ನಿಯಮಗಳನ್ನು ಪಾಲಿಸಬೇಕು. ನಿಯಮಗಳನ್ನು ಉಲ್ಲಂಘಿಸಿದರೆ ಹಾಲ್ನ ಮಾಲಕರಿಗೆ ದಂಡ ಹಾಗೂ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಸಭೆಯಲ್ಲಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಮದುವೆಗೆ ಸ್ಥಳೀಯ ಆಡಳಿತದಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ನಗರ ಠಾಣೆ ವ್ಯಾಪ್ತಿಯಲ್ಲಿ ನಡೆಯುವ ಮದುವೆಗೆ ಮುಖ್ಯಾಧಿಕಾರಿಯಿಂದ ಅನುಮತಿ ಪಡೆಯಬೇಕು. ಹಾಗೆಯೇ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆಯುವ ಮದುವೆಗೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಿಂದ ಅನುಮತಿ ಪಡೆಯಬೇಕು. ಅನುಮತಿ ಪಡೆಯದ ಮದುವೆಗೆ ಹಾಲ್ ಮಾಲಕರು ಹಾಲ್ ನೀಡಬಾರದು ಎಂದು ಸೂಚಿಸಿದರು.