ಮಂಗಳೂರು : ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ತಾಂಡವವಾಡುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಏಪ್ರಿಲ್ 21ರಿಂದ ಮೇ 14ರವರೆಗೆ ರಾಜ್ಯದಲ್ಲಿ ಈ ಹೊಸ ನಿಯಮಗಳು ಜಾರಿಯಲ್ಲಿರಲಿದ್ದು, ಶಾಲಾ-ಕಾಲೇಜು ಸೇರಿ ಎಲ್ಲ ಶಿಕ್ಷಣಸಂಸ್ಥೆಗಳು ಬಂದ್ ಮಾಡುವಂತೆ ರಾಜ್ಯ ಸರ್ಕಾರ ಮಾರ್ಗಸೂಚಿಯಲ್ಲಿ ಉಲ್ಲೇಖಿಸಿದೆ. ಆದ್ರೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಪರೀಕ್ಷೆಗಳನ್ನು ನಡೆಸಲು ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.
ಏಪ್ರಿಲ್ 19 ರಿಂದ ಪ್ರಾರಂಭವಾಗಿರುವ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ ( ವಿಟಿಯು) ಇಂಜಿನಿಯರಿಂಗ್ ಪರೀಕ್ಷೆ ಶನಿವಾರ ಹಾಗೂ ಭಾನುವಾರ ಪರೀಕ್ಷೆ ಇರೋದಿಲ್ಲ. ಉಳಿದ ದಿನಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ವಿಟಿಯು ಕುಲಪತಿ ಮಾಹಿತಿ ನೀಡಿದ್ದಾರೆ. ಈಗಾಗಲೇ ರಾಜ್ಯದ ಹಲವು ವಿಶ್ವವಿದ್ಯಾಲಯಗಳು ಪರೀಕ್ಷೆಗಳನ್ನು ಮುಂದೂಡಿವೆ. ಯುಜಿಸಿ ನೆಟ್, ಯುಪಿಎಸ್ ಪರೀಕ್ಷೆಗಳನ್ನು ಸಹ ಮುಂದೂಡಲಾಗಿದೆ.
ಈ ಬಗ್ಗೆ ವಿದ್ಯಾರ್ಥಿಗಳು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ವಿಟಿಯು ಪರೀಕ್ಷೆ ಮುಂದೂಡದ್ದಕ್ಕೆ ಮಂಗಳೂರು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೋವಿಡ್ ಆತಂಕದ ಮಧ್ಯೆ ಪರೀಕ್ಷೆ ಬರೆಯಲು ಆಗುತ್ತಿಲ್ಲವೆಂದು ಅವರು ತಿಳಿಸಿದ್ದಾರೆ.ನಮ್ಮ ಕಾಲೇಜಿಗೆ ಹಲವಾರು ಕೇರಳ, ಅಸ್ಸಾಂ, ಬಿಹಾರ ಮೂಲದ ವಿದ್ಯಾರ್ಥಿಗಳು ಬಸ್ಸಿನಲ್ಲಿ ಜರ್ನಿ ಮಾಡಿಕೊಂಡು ಬರುತ್ತಾರೆ ಅವರ ಬಗ್ಗೆ ಯಾವುದೇ ಮಾಹಿತಿ ಗೊತ್ತಿರುವುದಿಲ್ಲ ನಾವು ಅವರ ಜೊತೆ ಒಡನಾಟ ನಡೆಸುತ್ತೇವೆ, 15 ದಿನಗಳ ನಂತರವಷ್ಟೇ ನಮಗೆ ಕೋವಿಡ್ ಪಾಸಿಟಿವ್ ಲಕ್ಷಣಗಳು ತಿಳಿಯುತ್ತವೆ ಈಗಿರುವಾಗ ನಮ್ಮ ಮನೆಯಲ್ಲಿ ಮಕ್ಕಳು, ವಯಸ್ಸಾದವರು ಎಲ್ಲಾ ಇರುತ್ತಾರೆ ನಮ್ಮಿಂದಾಗಿ ಅವರುಗಳಿಗೇ ತೊಂದರೆಯಾಗಬಾರದು ಈ ನಿಟ್ಟಿನಲ್ಲಿ ತಕ್ಷಣ ಪರೀಕ್ಷೆಯನ್ನು ಮುಂದೂಡುವಂತೆ ವಿಟಿಯುಗೆ ಮನವಿ ಮಾಡುತ್ತೇವೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.