ಕಡಬ: ಮರ್ಧಾಳ ಸಮೀಪ ಕಾಡಾನೆ ದಾಳಿಗೆ ಎರಡು ಜೀವಗಳು ಬಲಿಯಾದ ಬೆನ್ನಲ್ಲೇ ಎಚ್ಚೆತ್ತುಕೊಂಡ ಅರಣ್ಯ ಇಲಾಖೆಯು ಕಾಡಾನೆಯನ್ನು ಸೆರೆಹಿಡಿಯಲು ಸಾಕಾನೆಯನ್ನು ತರಿಸಿದೆ.

ಸೋಮವಾರ ರಾತ್ರಿಯೇ ಬೃಹತ್ ಲಾರಿಗಳ ಮೂಲಕ ಮೈಸೂರು ಹಾಗೂ ದುಬಾರೆಯಿಂದ ಐದು ಆನೆಗಳು ಆಗಮಿಸಿದ್ದು, ಮಂಗಳವಾರ ಬೆಳಗ್ಗಿನಿಂದ ಕಾಡಾನೆಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆ ನಡೆಯಲಿದೆ.

ಅರಣ್ಯ ಇಲಾಖೆಯು ಕಾಡಾನೆಯ ಚಲನವಲನ ಪತ್ತೆ ಹಚ್ಚಲು ಡ್ರೋನ್ ಬಳಸಿ ಮಾಹಿತಿ ಕಲೆ ಹಾಕಿತ್ತು. ಪೂರ್ವ ಸಿದ್ದತೆಯೊಂದಿಗೆ ಕಾಡಾನೆಯನ್ನು ಪತ್ತೆ ಹಚ್ಚಿ ಹಿಡಿದು ಬೇರೆಡೆ ಸ್ಥಳಾಂತರ ಮಾಡಲು ಅರಣ್ಯ ಇಲಾಖಾಧಿಕಾರಿಗಳು ಯೋಜನೆ ರೂಪಿಸಿದ್ದಾರೆ.




























