ಪುತ್ತೂರು: ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ಪ್ರಯಾಣಿಕನೋರ್ವ ಬಸ್ ನಿರ್ವಾಹಕಿಗೆ ಹಲ್ಲೆ ನಡೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ನಿರ್ವಾಹಕಿ ನೀಡಿದ ದೂರಿನ ಮೇರೆಗೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಸ್ ನಿರ್ವಾಹಕಿ ವಿಟ್ಲ ಮೂಲದ ಕುಮಾರಿ ವಿಜಯ ಬಿ. ನೀಡಿದ ದೂರಿನ ಮೇರೆಗೆ ಪುತ್ತೂರು ಮುರ ನಿವಾಸಿ ಹಸನ್ ಎಂಬಾತನ ಮೇಲೆ ಪ್ರಕರಣ ದಾಖಲಾಗಿದೆ.
ಪುತ್ತೂರು-ಸ್ಟೇಟ್‌ಬ್ಯಾಂಕ್ ಕಡೆಗೆ ಹೋಗುವ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ನಿರ್ವಾಹಕಿಯಾಗಿ ಕರ್ತವ್ಯದಲ್ಲಿದ್ದ ವೇಳೆ ಬಸ್ಸು ಮದ್ಯಾಹ್ನ ಪುತ್ತೂರು ಬಸ್ ನಿಲ್ದಾಣದಿಂದ ಹೊರಟಿದ್ದು, ಬಸ್ಸಿನಲ್ಲಿ ತುಂಬಾ ಪ್ರಯಾಣಿಕರಿದ್ದು, ಕೆಲವರಿಗೆ ಕುಳಿತುಕೊಳ್ಳಲು ಸೀಟು ಸಿಗದೆ ನಿಂತುಕೊಂಡಿದ್ದರು. ಬಸ್ಸು ಮಾರ್ಕೆಟ್ ಬಳಿಯ ತಂಗುದಾಣಕ್ಕೆ ತಲುಪಿದಾಗ ಅಲ್ಲಿಂದ ಅಂಗವಿಕಲರೊಬ್ಬರು ಮತ್ತು ವೃದ್ಧರೊಬ್ಬರು ಬಸ್ಸಿಗೆ ಹತ್ತಿದ್ದು, ಬಳಿಕ ಸ್ವಲ್ಪ ಮುಂದೆ ಶ್ರೀಧರ್ ಭಟ್ ಜಂಕ್ಷನ್ ಬಳಿ ತಲುಪಿದಾಗ ಬಸ್ಸಿನ ಹಿಂಭಾಗದ ಮೂರನೇ ಸೀಟಿನಲ್ಲಿ ಕುಳಿತಿದ್ದ ಯುವಕನಲ್ಲಿ ನಿರ್ವಾಹಕಿ ವಿಜಯ ಅವರು ಅಂಗವಿಕಲರಿಗೆ ಸೀಟು ಬಿಟ್ಟುಕೊಡುವಂತೆ ಹೇಳಿದಾಗ ಆತನು ನಾವು ಕುಳಿತುಕೊಳ್ಳಲು ಇಲ್ಲವಾ ಎಂದು ಹೇಳಿದ್ದು, ಅದಕ್ಕೆ ವಿಜಯ ಅವರು, ಅವರು ಅಂಗವಿಕಲರಿದ್ದಾರೆ ಅವರಿಗೆ ನಿಂತುಕೊಳ್ಳಲು ಆಗುವುದಿಲ್ಲ ಎಂದು ಹೇಳಿದಾಗ ಆತನು ಅವಾಚ್ಯ ಶಬ್ದದಲ್ಲಿ ಬೈದಿದ್ದು, ಆಗ ವಿಜಯ ಅವರು ಆತನಲ್ಲಿ ಕೆಟ್ಟದಾಗಿ ಬಯ್ಯಬೇಡ ಎಂದು ಹೇಳಿದ್ದು, ಆಗ ಆತನು ಮತ್ತೆ ಅವಾಚ್ಯ ಶಬ್ದದಲ್ಲಿ ಬೈದು ನಿರ್ವಾಹಕಿ ವಿಜಯ ರವರ ಮೇಲೆ ಹಲ್ಲೆಗೆ ಮುಂದಾಗಿ ಅವರ ಕೈ ಹಿಡಿದು ತಿರುಚಿದ್ದು, ಬೊಬ್ಬೆ ಹೊಡೆಯುವುದನ್ನು ಕೇಳಿ ಚಾಲಕರು ಬಸ್ಸು ನಿಲ್ಲಿಸಿದಾಗ ಆತ ಬಸ್ ನಿಂದ ಇಳಿದು ಓಡಿ ಹೋಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆ. ಅ.ಕ್ರ 10/2023 ಕಲಂ: 504, 323, 353,354 ಐಪಿಸಿರಂತೆ ಪ್ರಕರಣ ದಾಖಲಾಗಿದೆ..