ಪುತ್ತೂರು: ಎನ್.ಐ.ಎ ಬೆಂಗಾವಲು ವಾಹನ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸಂಪ್ಯ ಮಸೀದಿ ಬಳಿ ನಿನ್ನೆ ರಾತ್ರಿ ನಡೆದಿದೆ.
ಅಪಘಾತದ ತೀವ್ರತೆಗೆ ಬೈಕ್ ಸವಾರ, ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಲಕ್ಷ್ಮಣ ನಾಯ್ಕ್ (50) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಪಾಣಾಜೆ ಕೋಟೆ ನಿವಾಸಿ ಲಕ್ಷ್ಮಣ ನಾಯ್ಕ್ ಮಾ.5 ರಂದು ಮಧ್ಯಾಹ್ನ ತನ್ನ ಬೈಕ್ ನಲ್ಲಿ ಪುತ್ತೂರಿಗೆ ಆಗಮಿಸಿದ್ದರು. ರಾತ್ರಿ ವೇಳೆ ಅವರು ಪುತ್ತೂರಿನಿಂದ ಪಾಣಾಜೆ ಮನೆ ಕಡೆ ವಾಪಸ್ಸಾಗುತ್ತಿದ್ದಾಗ ಸಂಪ್ಯ ತಲುಪುತ್ತಿದ್ದಂತೆ ಎದುರಿನಿಂದ ಬರುತ್ತಿದ್ದ ಎನ್‌ಐಎ ಬೆಂಗಾವಲು ವಾಹನ ಮತ್ತು ಇವರ ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಲಕ್ಷ್ಮಣ ನಾಯ್ಕ ಅವರ ಹೆಲ್ಮೆಟ್ ಹುಡಿಯಾಗಿದ್ದು ಅವರ ತಲೆಗೆ ಬಲವಾದ ಗಾಯವಾಗಿ ಮೃತಪಟ್ಟಿದ್ದಾರೆ.
ಘಟನೆ ನಡೆದ ಸಂದರ್ಭ ಅದೇ ರಸ್ತೆಯಾಗಿ ಹೋಗುತ್ತಿದ್ದ ನಗರಸಭಾ ಮಾಜಿ ಸದಸ್ಯ ರಮೇಶ್ ರೈ ಅವರು ತಕ್ಷಣ ಗಾಯಾಳುವನ್ನು ಸ್ಥಳೀಯರ ಸಹಕಾರದೊಂದಿಗೆ ಆಟೋ ರಿಕ್ಷಾವೊಂದರಲ್ಲಿ ಪುತ್ತೂರು ಆಸ್ಪತ್ರೆಗೆ ಕರೆ ತಂದರು. ಆದರೆ ಆ ವೇಳೆಗೆ ಲಕ್ಷ್ಮಣ ನಾಯ್ಕ ಅವರು ಮೃತಪಟ್ಟಿದ್ದರು.
ಲಕ್ಷ್ಮಣ ನಾಯ್ಕ ಅವರು ಕಳೆದ 10 ವರ್ಷಗಳಿಂದ ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. 1999ರಲ್ಲಿ ಸಂಘದಲ್ಲಿ ಕೆಲಸಕ್ಕೆ ಸೇರಿದ ಅವರು ಸಾರ್ವಜನಿಕ ವಲಯದಲ್ಲಿ ಚಿರಪರಿಚಿತರಾಗಿದ್ದರು.
ಮೃತರು ತಾಯಿ ಸರಸ್ವತಿ, ಪಾಣಾಜೆ ವಿವೇಕ ಆಂಗ್ಲಮಾಧ್ಯಮ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಪತ್ನಿ ಅನುರಾಧ, ಪುತ್ರಿಯರಾದ ತೃಷಾ ಮತ್ತು ತನ್ವಿ, ಸಹೋದರ ರಾಮ ನಾಯ್ಕ್, ಸಹೋದರಿಯರಾದ ಪುಷ್ಪಾ, ಶಶಿಕಲಾ ಅವರನ್ನು ಅಗಲಿದ್ದಾರೆ.
ಶಾಸಕ ಸಂಜೀವ ಮಠಂದೂರು, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲೊಟ್ಟು, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ನಗರಸಭಾ ಮಾಜಿ ಸದಸ್ಯ ರಮೇಶ್ ರೈ, ಕೆಎಮ್‌ಎಫ್ ನಿರ್ದೇಶಕ ನಾರಾಯಣ ಪ್ರಕಾಶ್, ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪದ್ಮನಾಭ ಬೋರ್ಕರ್, ಉಪಾಧ್ಯಕ್ಷ ಡಾ. ಅಖಿಲೇಶ್ ಪಾಣಾಜೆ, ಬಿಜೆಪಿ ಹಿಂದುಳಿದ ಮೋರ್ಚಾಗಳ ಜಿಲ್ಲಾಧ್ಯಕ್ಷ ಆರ್.ಸಿ ನಾರಾಯಣ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ನಿತೀಶ್ ಶಾಂತಿವನ, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ಸಹಿತ ನೂರಾರು ಮಂದಿ ಪುತ್ತೂರು ಸರಕಾರಿ ಆಸ್ಪತ್ರೆಯ ಶವಾಗಾರ ಕೊಠಡಿಯಲ್ಲಿದ್ದ ಮೃತದೇಹದ ಅಂತಿಮ ದರ್ಶನ ಮಾಡಿದರು.
ಡಿವೈಎಸ್ಪಿ ಡಾ. ವೀರಯ್ಯ ಹಿರೇಮಠ್, ನಗರ ಪೊಲೀಸ್ ಠಾಣೆ ಎಸ್.ಐ ಶ್ರೀಕಾಂತ್ ರಾಥೋಡ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಮೃತ ಸಂಬಂಧಿಕರಿಂದ ಮಾಹಿತಿ ಪಡೆದುಕೊಂಡರು.
ಅಂತಿಮ ದರ್ಶನ ಪಡೆಯಲು ನೂರಾರು ಮಂದಿ..:
ಲಕ್ಷ್ಮಣ ನಾಯ್ಕ್ ರವರ ಅಂತ್ಯಕ್ರಿಯೆ ಮಾ.6 ರಂದು ನಡೆಯಿತು.
ಬೆಳಿಗ್ಗೆ ಪುತ್ತೂರಿನಿಂದ ಆಂಬ್ಯುಲೆನ್ಸ್ ಮೂಲಕ ಬಂದ ಪಾರ್ಥಿವ ಶರೀರವನ್ನು ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆವರಣದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಇಡಲಾಯಿತು. ಈ ವೇಳೆ ಪಾಣಾಜೆ ಗ್ರಾಮದ ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ನೆರೆದು ಅಂತಿಮ ದರ್ಶನ ಪಡೆದರು.
ಅವರ ಸ್ವಗೃಹ ಕೋಟೆ ಮನೆಗೆ ಕರೆದೊಯ್ದು ಅಂತಿಮ ವಿಧಿವಿಧಾನ ನೆರವೇರಿಸಿ ಅಂತ್ಯಕ್ರಿಯೆ ನಡೆಸಲಾಯಿತು. ಮನೆಯಲ್ಲಿಯೂ ಪಾಣಾಜೆ, ನಿಡ್ಪಳ್ಳಿ, ಬೆಟ್ಟಂಪಾಡಿ ಗ್ರಾಮದ ನೂರಾರು ಸಾರ್ವಜನಿಕರು ಪಾಲ್ಗೊಂಡು ಅಂತಿಮ ದರ್ಶನ ಪಡೆದರು.
ಮನೆಯ ಆಧಾರಸ್ತಂಭವನ್ನು ಕಳೆದುಕೊಂಡ ಮೃತರ ಮನೆಯವರ ಆಕ್ರಂದನ ಮುಗಿಲು ಮುಟ್ಟಿತ್ತು. ಪತ್ನಿ, ಮಕ್ಕಳು, ಸಹೋದರಿಯರ ಕೂಗು ಕಲ್ಲೆದೆಯನ್ನೂ ಕರಗಿಸುವಂತಿತ್ತು.
ಆಕಸ್ಮಿಕ ಮರಣದಿಂದ ಬರಸಿಡಿಲು ಬಡಿದಂತಾದ ಪರಿಸ್ಥಿತಿ, ಹತಾಶೆ, ಎಳೆಯ ಕಂದಮ್ಮಗಳ ಮುಗ್ಧ ಭಾವದ ಅಳಲು ನೆರೆದವರ ಕಣ್ಣಲ್ಲೂ ನೀರು ಬರಿಸುತ್ತಿತ್ತು…