ಬಂಟ್ವಾಳ: ಬಿಹಾರದ ಪಾಟ್ನಾದಲ್ಲಿ ನಡೆದ ಪ್ರಧಾನಿ ಮೋದಿಯವರ ಕಾರ್ಯಕ್ರಮದಲ್ಲಿ ಬಾಂಬ್ ಇರಿಸಲು ಯತ್ನಿಸಿ ಬಂಧಿತರಾದ ಉಗ್ರರಿಗೆ ಹಣಕಾಸಿನ ನೆರವು ನೀಡಿರುವ ವಿಚಾರಕ್ಕೆ ಸಂಬಂಧಿಸಿ ಎನ್‌ಐಎ ತಂಡ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ ಮನೆಗಳಿಗೆ ದಾಳಿ ನಡೆಸಿದೆ.
ಬಂಟ್ವಾಳ ನಂದಾವರ ನಿವಾಸಿಗಳಾದ ಮಹಮ್ಮದ್ ಸಿನಾನ್, ಇಕ್ಬಾಲ್, ಸರ್ಫಾಜ್ ನವಾಜ್ ಹಾಗೂ ನೌಫಲ್ ಮನೆಗೆ ದಾಳಿ ನಡೆದು ತೀವ್ರ ವಿಚಾರಣೆ ನಡೆಸಲಾಗಿದೆ ಎನ್ನಲಾಗಿದ್ದು, ಜತೆಗೆ ಪಾಣೆಮಂಗಳೂರು ಹಾಗೂ ಮೆಲ್ಕಾರಿನ ಸೈಬರ್ ಕೆಫೆಗಳಿಗೂ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿದೆ. ಹಾಗೆಯೇ ಪುತ್ತೂರಿನ ಓರ್ವನನ್ನು ವಶಕ್ಕೆ ಪಡೆಯಲಾಗಿದೆ ಎಂದು ವರದಿಯಾಗಿದೆ.
ಪಾಟ್ನಾದಲ್ಲಿ ಬಾಂಬ್ ಇಡಲು ಯತ್ನಿಸಿದ್ದ ಉಗ್ರರನ್ನು ಬಂಧಿಸಲಾಗಿದ್ದು, ಅವರಿಗೆ ಈ ಆರೋಪಿಗಳು ಹಣಕಾಸಿನ ನೆರವು ಒದಗಿಸಿದ್ದಾರೆ ಎಂಬ ಕಾರಣಕ್ಕೆ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಆದರೆ ಇವರಿಗೆ ಆ ಹಣ ಎಲ್ಲಿಂದ ಬಂದಿದೆ ಎಂದು ಇನ್ನಷ್ಟೇ ತಿಳಿದು ಬರಬೇಕಿದೆ.
ಆರೋಪಿಗಳು ಉಗ್ರರ ಹಲವು ಬ್ಯಾಂಕ್ ಖಾತೆಗಳಿಗೆ ಕೋಟ್ಯಾಂತರ ರೂಪಾಯಿ ಹಣ ವರ್ಗಾವಣೆ ಮಾಡಿರುವ ಆತಂಕಕಾರಿ ವಿಚಾರ ತಿಳಿದು ಬಂದಿದ್ದು ತನಿಖೆಯ ಬಳಿಕವಷ್ಟೇ ಖಚಿತಗೊಳ್ಳಬೇಕಿದೆ.