ಆದಿಬಟ್ಲಾ ಬಳಿಯ ಹೊರ ವರ್ತುಲ ರಸ್ತೆಯಲ್ಲಿ ಭಾನುವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತೆಲುಗು ನಟ ಸೇರಿದಂತೆ ಆಂಧ್ರಪ್ರದೇಶದ ಇಬ್ಬರು ಸಾವನ್ನಪ್ಪಿದ್ದಾರೆ.
ಮೃತರನ್ನು ತೆಲುಗು ನಟ ಕೆ.ಭರತ್ ಕಾಂತ್ ಮತ್ತು ಜಿ.ಸಾಯಿ ತ್ರಿಲೋಕ್ (31) ಎಂದು ಗುರುತಿಸಲಾಗಿದೆ. ಇಬ್ಬರೂ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯವರು.
ಇವರಿಬ್ಬರೂ ಹೊರ ವರ್ತುಲ ರಸ್ತೆಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ, ಚಾಲಕ ಭರತ್ ಕಾಂತ್ ನಿಯಂತ್ರಣ ತಪ್ಪಿ ಮುಂದೆ ಚಲಿಸುತ್ತಿದ್ದ ಕಂಟೇನರ್ ಲಾರಿಗೆ ಡಿಕ್ಕಿ ಹೊಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದ ತೀವ್ರತೆಗೆ ಕಂಟೇನರ್ ಲಾರಿಯ ಹಿಂದಿನ ಚಕ್ರಗಳು ಕಳಚಿ ಬಿದ್ದವು. ಕಾರು ತೀವ್ರವಾಗಿ ಹಾನಿಗೊಳಗಾಗಿತ್ತು. ಭೀಕರ ಅಪಘಾತದಿಂದಾಗಿ ಭರತ್ ಕಾಂತ್ ಮತ್ತು ಸಾಯಿ ತ್ರಿಲೋಕ್ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತ ನಡೆದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
31 ವರ್ಷದ ಭರತ್ ಕಾಂತ್ ತೆಲುಗು ಡಿಜಿಟಲ್ ಪ್ರೇಕ್ಷಕರಲ್ಲಿ ನರ್ತಕ ಮತ್ತು ನಟನಾಗಿ ಹೆಸರುವಾಸಿಯಾಗಿದ್ದರು. ಇವರಿಗೆ ಸೋಶಿಯಲ್ ಮೀಡಿಯಾದಲ್ಲಿ ಅಪಾರ ಸಂಖ್ಯೆಯ ಫಾಲೋವರ್ಸ್ ಇದ್ದರು. ಇನ್‌ಸ್ಟಾಗ್ರಾಮ್‌ನಲ್ಲಿ ಸುಮಾರು 40,000 ಮತ್ತು ಯೂಟ್ಯೂಬ್‌ನಲ್ಲಿ 30,000 ಫಾಲೋವರ್ಸ್ ಹೊಂದಿದ್ದರು.



























