ಬಂಟ್ವಾಳ: ಬಿಹಾರದ ಪಟ್ನಾದ ಫುಲ್ವಾರಿ ಶರೀಫ್ನಲ್ಲಿ ನಡೆದ ಭಯೋತ್ಪಾದಕ ಚಟುವಟಿಕೆಗೆ ಸಂಬಂಧಿಸಿದಂತೆ ಬಂಟ್ವಾಳದ ನಂದಾವರ, ಪುತ್ತೂರು ಮತ್ತು ಮಂಜೇಶ್ವರದಿಂದ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಮಾ.5 ರಂದು ಬಂಧಿಸಿರುವ ಐವರು ಕೂಡ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಗೆ ಸೇರಿದವರು ಮತ್ತು ಅವರು ಭಯೋತ್ಪಾದಕರಿಗೆ 25 ಕೋ.ರೂ. ಹಣವನ್ನು ವರ್ಗಾವಣೆ ಮಾಡಿದ್ದಾರೆ ಎನ್ನಲಾಗಿದೆ.
ಇದೊಂದು ಪಿಎಫ್‌ಐಯ ಭಯೋತ್ಪಾದಕ ಚಟುವಟಿಕೆಯ ಬಹುರಾಜ್ಯ ಹವಾಲಾ ಸಂಪರ್ಕ ಜಾಲವಾಗಿದ್ದು, ದ.ಕ. ಹಾಗೂ ಕಾಸರಗೋಡಿನ ಪಿಎಫ್‌ಐ ಕಾರ್ಯಕರ್ತರು ಭಾಗಿಯಾಗಿರುವ ಕುರಿತು ಎನ್‌ಐಎ ಅಧಿಕಾರಿಗಳು ದಾಖಲೆ ಸಹಿತ ಪತ್ತೆಹಚ್ಚಿದ್ದಾರೆ.
ದೇಶಾದ್ಯಂತ ವಿಶೇಷವಾಗಿ ಕೇರಳ,ಕರ್ನಾಟಕ, ಬಿಹಾರ ಮೊದಲಾದ ರಾಜ್ಯಗಳಲ್ಲಿ ಪಿಎಫ್‌ಐ ಹವಾಲಾ ದಂಧೆ ನಡೆಸುತ್ತಿದ್ದು, ಫುಲ್ವಾರಿ ಶರೀಫ್ ಪ್ರಕರಣದ ತನಿಖೆ ವೇಳೆ ಹವಾಲಾ ಮೂಲಕ ಹಣ ಸಂದಾಯ ಗೊತ್ತಾಗಿತ್ತು.
ವಿದೇಶದಿಂದ ಬರುತ್ತಿದ್ದ ಭಾರೀ ಮೊತ್ತದ ಹಣವನ್ನು ಪಿಎಫ್ಐ ಸಂಘಟನೆಯ ಸದಸ್ಯರ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುವ ಜವಾಬ್ದಾರಿಯನ್ನು ನವಾಜ್ ಮತ್ತು ಮಹಮ್ಮದ್ ಸಿನಾನ್ ನಿರ್ವಹಿಸುತ್ತಿದ್ದರು. ಆದುದರಿಂದ ಹೆಚ್ಚಿನ ಮೊತ್ತ ಇವರ ಮೂಲಕವೇ ವಿವಿಧೆಡೆ ಹೋಗುತ್ತಿತ್ತು. ಇವರೀರ್ವರು ಬೇರೆ ಬೇರೆ ವ್ಯಕ್ತಿಗಳ ಅಕೌಂಟ್‌ನಿಂದ ಹಣವನ್ನು ವರ್ಗಾಯಿಸುತ್ತಿದ್ದರು ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಬಿಹಾರದ ಫುಲ್ವಾರಿ ಶರೀಫ್ ಹಾಗೂ ಮೋತಿಹಾರಿ ಪ್ರದೇಶಗಳಲ್ಲಿ ಪಿಎಫ್‌ಐ ಕಾರ್ಯಕರ್ತರು ಗುಪ್ತ ಚಟುವಟಿಕೆಗಳನ್ನು ಮುಂದುವರಿಸುತ್ತಿದ್ದು, ಪೂರ್ವ ಚಂಪಾರಣ್ ಜಿಲ್ಲೆಯಲ್ಲಿ ನಿರ್ದಿಷ್ಟ ಸಮುದಾಯದ ಯುವಕರನ್ನು ನಿರ್ಮೂಲ ಮಾಡುವ ಉದ್ದೇಶದಿಂದ ಬಂದೂಕು ಹಾಗೂ ಮದ್ದುಗುಂಡುಗಳನ್ನು ಸಜ್ಜುಗೊಳಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿ ಮಾ. 5ರಂದು ಮೂವರನ್ನು ಬಂಧಿಸಲಾಗಿತ್ತು.
ಬಂಧಿತರು ಕೆಲವೊಂದು ಶಂಕಿತ ಭಯೋತ್ಪಾದಕರ ಬ್ಯಾಂಕ್ ಖಾತೆಗಳಲ್ಲಿ ಠೇವಣಿ ಇಡುತ್ತಿರುವುದು ಬೆಳಕಿಗೆ ಬಂದಿದೆ. ಬಂಧಿತರನ್ನು ಶೀಘ್ರದಲ್ಲಿ ಪಟ್ನಾದ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ನಿಷೇಧಿತ ಪಿಎಫ್‌ಐ ಸಂಘಟನೆಯ ದೇಶೀಯ, ಅಂತಾರಾಷ್ಟ್ರೀಯ ಅಕ್ರಮ ಹಣದ ದಂಧೆಯ ಕುರಿತು ಉನ್ನತ ತನಿಖೆಗೆ ಪ್ರಗತಿಯಲ್ಲಿದೆ ಎಂದು ಎನ್‌ಐಎ ವಿವರಿಸಿದೆ.
ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ನಂದಾ ವರದ ಮಹಮ್ಮದ್ ಸಿನಾನ್, ಇಕ್ಬಾಲ್, ಸಜೀಪ ಮೂಡದ ಸಫ್ರಾಜ್ ನವಾಜ್, ಪುತ್ತೂರಿನ ಅಬ್ದುಲ್ ರಫೀಕ್ ಹಾಗೂ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಸಮೀಪದ ಕುಂಜತ್ತೂರಿನ ಅಬೀದ್ ಸೇರಿ ಒಟ್ಟು ಐವರನ್ನು ಬಂಧಿಸಿ ಪಟ್ನಾಕ್ಕೆ ಕರೆದೊಯ್ದಿದ್ದಾರೆ.