ಪ್ರೇಮಿಯೊಬ್ಬ ಪ್ರಿಯತಮೆಗೆ ಬರ್ಬರವಾಗಿ ಚಾಕು ಇರಿದು ಕೊಂದ ಘಟನೆ ಜಮ್ಮುವಿನಲ್ಲಿ ನಡೆದಿದೆ.
ಇಬ್ಬರ ನಡುವೆ ಶುರುವಾದ ಜಗಳ ದೊಡ್ಡ ಗಲಾಟೆಯಾಗಿ ಪ್ರಿಯತಮೆಯನ್ನು ಅಡುಗೆ ಮನೆಯ ಚಾಕುವಿನಿಂದ ಇರಿದು ಕೊಂದಿದ್ದಾನೆ. ನಂತರ ಅದೇ ಚಾಕುವಿನಿಂದ ತಾನೂ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದು, ಸದ್ಯ ಜಮ್ಮುವಿನಲ್ಲಿರುವ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಹತ್ಯೆಯಾದ ಮಹಿಳೆಯು ವೈದ್ಯೆಯಾಗಿದ್ದು, ಸುಮೆಧಾ ಶರ್ಮಾ ಎಂದು ತಿಳಿದು ಬಂದಿದೆ.
ಸುಮೇಧಾ ಜಮ್ಮುವಿನ ತಲ್ಲಾಬ್ ತಿಲ್ಲೋ ಕಾಲೋನಿಯ ನಿವಾಸಿಯಾಗಿದ್ದಳು. ಜೋಹರ್ ಗಣ್ಯೆ ಚಾಕು ಇರಿದ ಆರೋಪಿಯಾಗಿದ್ದು, ಈತ ಪಂಪೋಶ್ ಕಾಲೋನಿಯ ನಿವಾಸಿಯಾಗಿದ್ದಾನೆ.

ಪ್ರಿಯತಮೆಯನ್ನು ಕೊಂದ ಬಳಿಕ ಆರೋಪಿಯು ಫೇಸ್ ಬುಕ್‌ನಲ್ಲಿ ಪೋಸ್ಟ್ ಒಂದನ್ನು ಹಾಕಿದ್ದ. ನಾನು ವೈಯಕ್ತಿಕ ಕಾರಣಗಳಿಂದ ಜೀವನವನ್ನು ಕೊನೆಗೊಳಿಸುತ್ತಿದ್ದೇನೆ ಎಂದು. ಇದನ್ನು ಗಮನಿಸಿದ ಸಂಬಂಧಿಕರು ಕೂಡಲೇ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಪೊಲೀಸರು ಆತನ ಮನೆಗೆ ದೌಡಾಯಿಸಿದ್ದಾರೆ.
ಆರೋಪಿ ಮನೆಯು ಲಾಕ್ ಆಗಿತ್ತು. ಕೊನೆಗೆ ಬಾಗಿಲನ್ನು ಒಡೆದು ಒಳನುಗ್ಗಿದ್ದಾರೆ. ಮನೆಯಲ್ಲಿರುವ ಸ್ವಿಮ್ಮಿಂಗ್ ಪೂಲ್‌ನಲ್ಲಿ ಸುಮೇಧಾ ಶವ ತೇಲುತ್ತಿತ್ತು. ಅಲ್ಲೇ ಆರೋಪಿ ಕೂಡ ಹೊಟ್ಟೆಗೆ ಚಾಕು ಇರಿದುಕೊಂಡು ಬಿದ್ದಿದ್ದ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನ್ನು ರಕ್ಷಣೆ ಮಾಡಿದ್ದಾರೆ.
ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆ) ಪ್ರಕರಣ ದಾಖಲಿಸಿಕೊಂಡು ತನಿಖೆ ಶುರುಮಾಡಿದ್ದಾರೆ.
ಮಾಹಿತಿಗಳ ಪ್ರಕಾರ, ಇಬ್ಬರು ಬಿಡಿಎಸ್ (ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ)ಯನ್ನು ಓದಿದ್ದರು. ಇನ್ನು ಸುಮೇದ ಎಂಡಿಎಸ್ ಕೂಡ ಮಾಡಿದ್ದಳು. ಓದುವ ಸಂದರ್ಭದಿಂದ ಇಬ್ಬರು ಲೀವ್ ಇನ್ ರಿಲೇಷನ್‌ಶಿಪ್ ನಲ್ಲಿದ್ದರು. ಮಾರ್ಚ್ 7 ರಂದು ಹೋಳಿ ಹಬ್ಬ ಹಿನ್ನೆಲೆಯಲ್ಲಿ ಸ್ನೇಹಿತನ ಜೊತೆ ಹೋಳಿ ಆಚರಿಸಲು ಬಂದಿದ್ದಳು. ಈ ವೇಳೆ ಇಬ್ಬರ ಮಧ್ಯೆ ಗಲಾಟೆ ನಡೆದಿದೆ ಎನ್ನಲಾಗಿದೆ.